ಪಿಯುಸಿಯಲ್ಲಿ ತುಳು ಪಠ್ಯ ಸೇರ್ಪಡೆಗೆ ಮನವಿ

ಮಂಗಳೂರು, ಜೂ.7: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿಯ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಿಧಾನಸೌಧದ ಮುಖ್ಯ ಮಂತ್ರಿಯವರ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿ ಪಿಯುಸಿ ತರಗತಿಯಲ್ಲಿ ಐಚಿಕ್ಕ ಪಠ್ಯ ವಿಷಯವಾಗಿ ತುಳುವನ್ನು ಸೇರ್ಪಡೆ ಮಾಡುವ ವಿಚಾರವಾಗಿ ಮನವಿ ಸಲ್ಲಿಸಿ ಮಾತುಕತೆ ನಡೆಸಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುಖ್ಯಮಂತ್ರಿಗಳ ಜೊತೆ ಈ ಮಾತುಕತೆಯನ್ನು ಆಯೋಜಿಸಿದ್ದರು. ತುಳು ಪಠ್ಯವನ್ನು ಈಗಾಗಲೇ ಪ್ರೌಢಶಾಲೆಯಲ್ಲಿ, ಪದವಿ ಶಿಕ್ಷಣದಲ್ಲಿ ಮತ್ತು ಸ್ನಾತಕೋತ್ತರ ಪದವಿ ತರಗತಿಯಲ್ಲಿ ಅಳವಡಿಸಿಕೊಳ್ಳಾಗಿದೆ. ಪಿಯುಸಿ ತರಗತಿಯಲ್ಲಿ ಮಾತ್ರ ತುಳು ಪಠ್ಯ ಜಾರಿಗೆ ಬರಲು ಬಾಕಿ ಇದೆ ಎಂಬ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಯಿತು. ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಮುಂಚಿತವಾಗಿ ಪಿಯುಸಿ ತರಗತಿಗಳಿಗೆ ಕೂಡ ತುಳು ಪಠ್ಯವನ್ನು ಐಚ್ಛಿಕ ವಿಷಯವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಯಿತು. ತಕ್ಷಣ ಪಿಯು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಂಗಳೂರಿನಲ್ಲಿ ತುಳುಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇಕಾದ 3.6 ಕೋ.ರೂ. ಬಿಡುಗಡೆ ಮಾಡುವಂತೆಯೂ ಮುಖ್ಯಮಂತ್ರಿಯ ಗಮನ ಸೆಳೆಯಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರಾ, ಅಕಾಡಮಿಯ ಸದಸ್ಯರಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಬೆನೆಟ್ ಅಮ್ಮನ್ನ ಉಪಸ್ಥಿತರಿದ್ದರು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿತು.





