ಜಿಎಸ್ಟಿ ಬದಲಾವಣೆ ಕುರಿತು ಜಾಗೃತಿ ಅಗತ್ಯ: ಸಚಿವ ವೆಂಕಟ್‌ರಾವ್ ನಾಡಗೌಡ
ರಾಜ್ಯಮಟ್ಟದ ಲೆಕ್ಕಪರಿಶೋಧಕರ ಸಮ್ಮೇಳನ

ಬೆಂಗಳೂರು, ಜೂ.7: ಜಿಎಸ್‌ಟಿ ಬದಲಾವಣೆಯಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಪಶುಸಂಗೋಪನಾ ಇಲಾಖೆ ಸಚಿವ ವೆಂಕಟ್‌ರಾವ್ ನಾಡಗೌಡ ತಿಳಿಸಿದ್ದಾರೆ.
ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಲೆಕ್ಕಪರಿಶೋಧಕರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್‌ಟಿಯು ಯಶಸ್ವಿಯಾಗಿ ನಡೆಯಲು ಲೆಕ್ಕಪರಿಶೋಧಕ ಪಾತ್ರವೂ ಬಹಳಷ್ಟಿದೆ. ಅವರ ಶ್ರಮದಿಂದಲೇ ಉತ್ತಮವಾಗಿ ತೆರಿಗೆ ಸಂಗ್ರಹದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಲೆಕ್ಕಪರಿಶೋಧಕರಿಗೆ ಮೌಲ್ಯ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಲೆಕ್ಕ ಪರಿಶೋಧಕರ ಅಗತ್ಯ ಬರಬಹುದು. ಆದರೆ, ಇಂದಿನ ವಿದ್ಯಾರ್ಥಿಗಳು ಸಿಎ ಓದಿದರೆ ಉದ್ಯೋಗ ಸಿಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ, ಲೆಕ್ಕಪರಿಶೋಧನೆಗಳ ಕುರಿತು ಪಿಯುಸಿ ಹಂತದಲ್ಲಿಯೇ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ನಮ್ಮ ದೇಶ ಅತಿ ವೇಗವಾಗಿ ಬದಲಾವಣೆಯಾಗುತ್ತಿದೆ. ಆದರೆ, ಒಂದೆಡೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶದ ಕಡೆಗೆ ಸಾಗುತ್ತಿದೆ. ಇನ್ನೊಂದು ಕಡೆ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೃಷಿ ಹವಾಮಾನದ ಮೇಲೆ ನಿಂತಿದ್ದು, ರೈತರು ಕೃಷಿ ಜತೆಗೆ ಉಪ ಕಸುಬುಗಳನ್ನು ಮಾಡಿಕೊಂಡರೆ ಆತ್ಮಹತ್ಯೆಗಳು ತಪ್ಪುತ್ತವೆ ಎಂದ ಅವರು, ಈ ಕುರಿತು ರೈತರಿಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಐಸಿಎಐ ಹಾಗೂ ಎಸ್‌ಐಆರ್‌ಸಿ ಅಧ್ಯಕ್ಷ ಸಿ.ಎ.ಚೋಮನ್ ಮಾತನಾಡಿ, ಭಾರತದ ಸಿಎಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ, ನಮ್ಮಲ್ಲಿ ಇದೀಗ ಸಿಎ ಎಂಬುದೇ ಬೇಡದಂತಾಗಿದೆ. ಬುದ್ಧಿವಂತಿಕೆಯಿಂದ ಸಿಎ ಪಾಸ್ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ. ಆ ಕಡೆಗೆ ಎಲ್ಲರೂ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಲೆಕ್ಕಪರಿಶೋಧಕ ಸಂಘದ ಸಿ.ಎ.ಅಬ್ದುಲ್ ಮಜೀದ್, ದಯಾನಿವಾಸ್ ಶರ್ಮ, ಅಮರ್ ದುಟಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







