ಉಡಾನ್ ಯೋಜನೆಯಡಿ ಮೈಸೂರು-ಬೆಂಗಳೂರಿಗೆ ವಿಮಾನ ಹಾರಾಟ ಆರಂಭ

ಮೈಸೂರು,ಜೂ.7: ಪ್ರಾದೇಶಿಕ ಯೋಜನೆ ಉಡಾನ್ -3 ಅಡಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಮಾನ ಸೇವೆಯನ್ನು ಇಂದಿನಿಂದ ಆರಂಭಿಸಲಾಯಿತು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು. ಈ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆಯ ಆಯುಕ್ತೆ ಶಿಲ್ಪನಾಗ್ ಮತ್ತಿತರರು ಪಾಲ್ಗೊಂಡಿದ್ದರು.
ಮೊದಲ ಲಕ್ಕಿ ಪ್ರಯಾಣಿಕರಿಗೆ ಕೇಕ್ ಹಾಗೂ ಬೋರ್ಡಿಂಗ್ ಪಾಸ್ ನೀಡಿ ಸಚಿವ ಜಿ.ಟಿ ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಶುಭ ಕೋರಿದರು. ಜತೆಗೆ ಕೇಕ್ ಕತ್ತರಿಸಿ ಸಚಿವ ಜಿ.ಟಿ ದೇವೇಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಪರಸ್ಪರ ಕೇಕ್ ತಿನ್ನಿಸಿದರು.
ವಾರದಲ್ಲಿ ಐದು ದಿನಗಳ ಕಾಲ ಮೈಸೂರು ಬೆಂಗಳೂರು ನಡುವೆ ವಿಮಾನ ಹಾರಾಟ ನಡೆಸಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಈ ವಿಮಾನ ಹಾರಾಟ ಪ್ರಾರಂಭಿಸಲಾಗಿದ್ದು ಉಡಾನ್-3 ಯೋಜನೆಯ ಎರಡನೇ ವಿಮಾನ ಇದಾಗಿದೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಇಂಡಿಯನ್ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ 9I 540 ವಿಮಾನ ಪ್ರತಿದಿನ ಬೆಳಿಗ್ಗೆ 11.15 ಕ್ಕೆ ಮೈಸೂರಿಗೆ ಆಗಮಿಸಿ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ. ಈಗಾಗಲೇ ಮೈಸೂರು ಹೈದ್ರಾಬಾದ್ ಹಾಗೂ ಚೆನೈ ನಡುವೆ ಕೂಡ ವಿಮಾನ ಹಾರಾಟ ಆರಂಭವಾಗಿದೆ. ಪ್ರಾದೇಶಿಕ ವಿಮಾನಯಾನ ಉತ್ತೇಜನ ದೃಷ್ಟಿಯಿಂದ ವಿಮಾನ ಸೇವೆಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಚ್ಚಿನ್, ಗೋವಾ, ಮುಂಬೈಗೆ ವಿಮಾನ ಸೇವೆ ಆರಂಭವಾಗಲಿದೆ ಎಂದು ತಿಳಿಸಿದರು.







