ಚಾಮುಂಡೇಶ್ವರಿ ಕ್ಷೇತ್ರ ಮಾಜಿ ಶಾಸಕ ಎಂ.ಸತ್ಯನಾರಾಯಣ ನಿಧನ

ಮೈಸೂರು,ಜೂ.7: ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಂ.ಸತ್ಯನಾರಾಯಣ ಅನಾರೋಗ್ಯದಿಂದ ಗುಂಗ್ರಾಲ್ ಛತ್ರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿರ್ಮಲಾ, ಪುತ್ರರಾದ ಅರುಣ್ ಕುಮಾರ್, ಜಗದೀಶ್, ಪುತ್ರಿ ಎಸ್.ಸುನೀತಾ ರನ್ನು ಅಗಲಿದ್ದಾರೆ. ಶುಕ್ರವಾರ ಅವರ ಅಂತ್ಯಕ್ರಿಯೆ ಸ್ವಗ್ರಾಮದ ತೋಟದಲ್ಲಿ ನೆರವೇರಿತು.
ಸಚಿವ ಜಿ.ಟಿ.ದೇವೇಗೌಡ ಸಂತಾಪ: ನನ್ನ ಆತ್ಮೀಯರೂ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಎಂ ಸತ್ಯನಾರಾಯಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಗಿದೆ. ನನ್ನ ಮತ್ತು ಅವರ ನಡುವಿನ ಸಂಬಂಧ ಸುದೀರ್ಘವಾದದ್ದು. ನನ್ನ ಸೋದರ ಸಂಬಂಧಿಗಳಾಗಿದ್ದ ಇವರು ಮತ್ತು ನಾನು, ಸಹಕಾರ ಸಂಘಗಳ ಚುನಾವಣೆಯಿಂದಲೇ ರಾಜಕೀಯ ಪ್ರವೇಶಿಸಿದವರು. ಇವರ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ, ಶೋಕ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ: ನಾನು ಸತ್ಯ ನಾರಾಯಣ ಏಕಕಾಲಕ್ಕೆ ರಾಜಕೀಯ ಜೀವನ ಆರಂಭಿಸಿದ್ದೆವು. 1977 ರಲ್ಲಿ ಇಬ್ಬರು ತಾಲೂಕು ಅಭಿವೃದ್ಧಿ ಮಂಡಳಿ ಚುನಾವಣೆಗೆ ನಿಂತಿದ್ದೆವು. ಜನತಾ ಪಕ್ಷದಿಂದ ಇಬ್ಬರೂ ಗೆಲುವು ಸಾಧಿಸಿದ್ದೆವು. ನನಗೆ ಸತ್ಯನಾರಾಯಣ ಅತ್ಯಂತ ಆಪ್ತ ಸ್ನೇಹಿತ. ಸರಳ ಸಜ್ಜನಿಕೆಯ ರಾಜಕಾರಣಿ ಎಂದರು.
2008ರಲ್ಲಿ ನಾನು ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಆಗ ನಾನೇ “ಸತ್ಯ ನೀನು ಚಾಮುಂಡೇಶ್ವರಿಯಲ್ಲಿ ನಿಂತುಕೋ” ಅಂತ ಕಾಲ್ ಮಾಡಿ ಹೇಳಿದ್ದೆ. ಚುನಾವಣೆಗೆ ನಿಲ್ಲುತ್ತೇನೆಂದು ಸತ್ಯಪ್ಪ ಅಂದುಕೊಂಡೇ ಇರಲಿಲ್ಲ. ಅವನಿಗೆ ನಾನೇ ಟಿಕೆಟ್ ಕೊಡಿಸಿದ್ದೆ. ಗೆದ್ದು ಎಂಎಲ್‍ಎ ಕೂಡ ಆಗಿದ್ದರು. ಅವರು ಪಕ್ಷದಲ್ಲಿ ನಿಷ್ಠೆಯಿಂದ ಇದ್ದವರು. ವೈಯುಕ್ತಿಕವಾಗಿ ಅವರು ನನಗೆ ಆಪ್ತ ಸ್ನೇಹಿತ. ಅವರ ಸಾವು ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.







