'ಮೋಡ ಬಿತ್ತನೆ' ಕೈಬಿಡಲು ಶಾಸಕ ಅಪ್ಪಚ್ಚುರಂಜನ್ ಆಗ್ರಹ

ಮಡಿಕೇರಿ ಜೂ.7: ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ ಮೋಡ ಬಿತ್ತನೆ ಕಾರ್ಯವನ್ನು ಕೈ ಬೀಡುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಿನಿಂದ ಸುರಿದ ಬಾರಿ ಮಳೆಯಿಂದ ಜಲ ಪ್ರಳಯ ಉಂಟಾಗಿ ಇಲ್ಲಿ ಅತೀ ಹೆಚ್ಚು ಅನಾಹುತ ಆಗಿರುವುದು ತಮಗೆ ತಿಳಿದ ವಿಷಯವಾಗಿದೆ. ಆದರೆ ಈಗ ಸರ್ಕಾರದಿಂದ ಮೋಡ ಬಿತ್ತನೆಗೆ ಮುಂದಾಗಿರುವುದು ತಿಳಿದು ಬಂದಿದೆ.
ಒಂದೆಡೆ ಹವಾಮಾನ ಇಲಾಖೆಯು 2019ರ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳಬಹುದೆಂದು ಹಾಗೂ ಈ ಹಿಂದಿನಂತೆಯೇ ಜಲ ಪ್ರಳಯ ಉಂಟಾಗಬಹುದೆಂದು ಮುನ್ಸೂಚನೆ ನೀಡಿದ್ದು, ಈ ಸಮಯದಲ್ಲಿ ಮೋಡ ಬಿತ್ತನೆ ಮಾಡಿದಲ್ಲಿ ಇನ್ನೂ ಹೆಚ್ಚಾಗಿ ಮಳೆ ಬೀಳುವುದರಿಂದ ಕಳೆದ ಬಾರಿಗಿಂತ ಈ ಬಾರಿ ಅತೀ ಹೆಚ್ಚು ಮಳೆ ಬಿದ್ದು, ಅನಾಹುತ ಹೆಚ್ಚಾಗುತ್ತದೆ. ಅಲ್ಲದೆ ಮೋಡ ಬಿತ್ತನೆಗೆ ಉಪಯೋಗಿಸುವ ರಾಸಾಯನಿಕವು ಸಸ್ಯ ಸಂಕುಲ, ಪ್ರಾಣಿ ಸಂಕುಲ ಮಾನವ ಹಾಗೂ ಮಣ್ಣಿನ ಮೇಲೆ ದುಷ್ಪರಿಣಾಮ ಬೀರುವುದರಿಂದ ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ ಮೋಡ ಬಿತ್ತನೆ ಕಾರ್ಯವನ್ನು ಕೈ ಬಿಡುವಂತೆ ಎಂ.ಪಿ.ಅಪ್ಪಚ್ಚುರಂಜನ್ ಸರಕಾರಕ್ಕೆ ಮನವಿ ಮಾಡಿದ್ದಾರೆ.





