'ಸತ್ತ, ಕದ್ದ ದನಗಳ ಮಾಂಸ ಮಾರುವವರು ಯಾರೇ ಆದರೂ ಪೊಲೀಸರಿಗೆ ಮಾಹಿತಿ ನೀಡಿ'
ಜುಮಾ ಸಂದೇಶದಲ್ಲಿ ಮುಲ್ಕಿ ಖತೀಬ್ ಎಸ್ಬಿ ದಾರಿಮಿ ಆಗ್ರಹ
ಮಂಗಳೂರು, ಜೂ.7: ಸಣ್ಣ ವಾಹನಗಳಲ್ಲಿ ಐದಾರು ಜಾನುವಾರುಗಳನ್ನು ಕೈ ಕಾಲು ಕಟ್ಟಿ ಕೊಂಡೊಯ್ಯುವ ವೇಳೆ ಅದರಲ್ಲಿರುವ ಎಲ್ಲಾ ಜಾನುವಾರುಗಳೂ ಉಸಿರು ಗಟ್ಟಿ ಸತ್ತು ಹೋಗಿದ್ದ ಹೃದಯ ವಿದ್ರಾವಕ ಘಟನೆಯ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಈ ಕೃತ್ಯ ಅಕ್ಷಮ್ಯವಾಗಿದ್ದು ಇಂತಹ ಪ್ರಕರಣಗಳು ಮುಸ್ಲಿಮರ ಗಮನಕ್ಕೆ ಬಂದ ತಕ್ಷಣ ಅಂಥವರನ್ನು ಯಾವುದೇ ಮುಲಾಜಿಲ್ಲದೆ ಯಾವ ಧರ್ಮದವರಾದರೂ ಸರಿ, ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಬಂಧಿಸುವ ಕೆಲಸ ಮಾಡಿಸಬೇಕಾಗಿದೆ ಎಂದು ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಶುಕ್ರವಾರ ಜುಮಾ ಸಂದೇಶದಲ್ಲಿ ಹೇಳಿದ್ದಾರೆ.
ಸತ್ತ ಮತ್ತು ಕಳವುಗೈದ ಜಾನುವಾರುಗಳ ಮಾಂಸ ಮುಸ್ಲಿಮರಿಗೆ ನಿಷಿದ್ಧವಾಗಿದೆ. ಈ ಹರಾಮನ್ನು ಮುಸ್ಲಿಮರಿಂದ ಮಾಡಿಸುವ ಸಮಾಜ ದ್ರೋಹಿಗಳಿಗೆ ಕಡಿವಾಣ ಹಾಕಬೇಕಾದದ್ದು ಸರಕಾರದ ಕರ್ತವ್ಯವಾಗಿದೆ. ಈ ಜವಾಬ್ದಾರಿಯನ್ನು ಪೊಲೀಸರು ಸರಿಯಾಗಿ ನಿರ್ವಹಿಸದ ಕಾರಣ ಗೋರಕ್ಷಣೆ ನೆಪದಲ್ಲಿ ಹುಟ್ಟಿಕೊಂಡ ತಥಾಕತಿತ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿದೆ. ಸರಕಾರ ಇಂತಹದ್ದಕ್ಕೆ ಆಸ್ಪದ ನೀಡದಂತೆ ಎಚ್ವರವಹಿಸಬೇಕು ಎಂದು ಎಸ್‌ಬಿ ದಾರಿಮಿ ಆಗ್ರಹಿಸಿದರು.
ಇಂತಹ ಘಟನೆಗಳು ಪದೇ ಪದೇ ಮರುಕಳಿಸಲು ಪ್ರಾಮಾಣಿಕ ಜಾನುವಾರು ವ್ಯಾಪಾರಿಗಳಿಗೆ ಪರವಾನಿಗೆ ನೀಡಿ ಅವರಿಗೆ ರಕ್ಷಣೆ ನೀಡುವುದರಲ್ಲಿ ಉಂಟಾಗುತ್ತಿರುವ ವೈಫಲ್ಯವೇ ಕಾರಣವಾಗಿದೆ. ನಿರುಪಯುಕ್ತ ಜಾನುವಾರುಗಳನ್ನು ಮಾಂಸಕ್ಕಾಗಿ ವಿಲೇವಾರಿ ಮಾಡಲು ಸರಕಾರ ಮತ್ತು ಸಂಘಟನೆಗಳು ಅನುವು ಮಾಡಿಕೊಟ್ಟರೆ ಈ ರೀತಿ ಕದ್ದು ಮುಚ್ಚಿ ಅಮಾನವೀಯವಾಗಿ ಜಾನುವಾರು ಸಾಗಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹಿಂದೂ ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟು ಸೇರಿ ಚರ್ಚೆ ನಡೆಸಿ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದು ಮತ್ತು ಅದನ್ನು ಎಲ್ಲರೂ ಪಾಲಿಸುವುದು ದೇಶದ ಶಾಂತಿ ಸೌಹಾರ್ದದ ನಿಟ್ಟಿನಲ್ಲಿ ಬಹಳ ಅಗತ್ಯವಾಗಿದೆ ಎಂದು ಹೇಳಿದ ಖತೀಬ್ ಎಸ್ಬಿ ದಾರಿಮಿ ಅಭಿವೃದ್ಧಿಯನ್ನು ಕಡೆಗಣಿಸಿ ಕೇವಲ ಪ್ರಾಣಿ ಪಕ್ಷಿಗಳ ಹೆಸರಲ್ಲಿ ರಾಜಕೀಯ ಮಾಡುವ ಕಾಲ ಇದಲ್ಲ ಎಂದು ನುಡಿದರು.







