ಭಾರತೀಯ ವೈದ್ಯಕೀಯ ಪದ್ಧತಿ ಕುರಿತ ಕೀಳರಿಮೆ ದೂರ: ಡಾ.ಹೆಗ್ಗಡೆ

ಉಡುಪಿ, ಜೂ.8: ಈ ಹಿಂದೆ ಭಾರತೀಯ ವೈದ್ಯಕೀಯ ಪದ್ಧತಿ ಕುರಿತು ಹೊಂದಿದ್ದ ಕೀಳರಿಮೆ ಇಂದು ದೂರವಾಗಿದೆ. ಆರ್ಯುವೇದ ನಮ್ಮ ದೇಹದ ಪಂಚೇಂದ್ರಿಯಗಳನ್ನು ನಿಯಂತ್ರಿಸುತ್ತದೆ. ಚಿಕಿತ್ಸೆಗಿಂತ ರೋಗವನ್ನು ಗುಣಪಡಿಸು ವುದರ ಮೂಲಕ ವಿರೋಧ ಬಾರದಂತೆ ತಡೆಗಟ್ಟುವುದು ಮುಖ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶನಿವಾರ ನಡೆದ ‘ವಿಶಿಖಾನುಪ್ರವೇಶ ಪದವಿ ಪ್ರದಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ಪಥ್ಯ ಎಂಬುದೇ ಇಲ್ಲ. ಆಹಾರ ಕ್ರಮದಲ್ಲಿ ಬದಲಾವಣೆ ಅದರಲ್ಲಿ ಇಲ್ಲ. ಇದರಿಂದ ರೋಗಗಳು ಹೆಚ್ಚುತ್ತವೆ. ಆದರೆ ಆರ್ಯವೇದದಲ್ಲಿ ಪಥ್ಯ ಎಂಬುದು ಬಹಳ ಮುಖ್ಯ. ಚಿಕಿತ್ಸೆಯ ಸಂದರ್ಭದಲ್ಲಿ ದೇಹಕ್ಕೆ ಪೂರಕವಾಗುವ ಆಹಾರವನ್ನು ಮಾತ್ರ ನೀಡಲಾಗುತ್ತದೆ ಎಂದರು.
ಜನಪದ ಔಷಧ ಮೋಸ ಎಂಬ ಮನೋಭಾವ ಬದಲಾಗಿದೆ. ಕಳೆದ 30 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜಾನಪದ ಔಷಧಿ ವಿಭಾಗದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ವಿವಿಧ ಔಷಧಿಯಗಳನ್ನು ತಯಾರಿಸ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ನವದೆಹಲಿಯ ಸಿಸಿಆರ್‌ಎಎಸ್ ಇದರ ವ್ಯವಸ್ಥಾಪಕ ನಿರ್ದೇಶಕ ಪ್ರೊ.ವೈದ್ಯ ಕರ್ತಾರ್ ಸಿಂಗ್ ಧೀಮನ್ ಮಾತನಾಡಿ, ಆರ್ಯು ವೇದ ಮನುಷ್ಯನ ಬದುಕು ಮತ್ತು ಆರೋಗ್ಯ ಪದ್ಧತಿಗೆ ಸಂಬಂಧ ಪಟ್ಟದಾಗಿದ್ದು, ಇದನ್ನು ಚಿಕಿತ್ಸೆಗಿಂತ ಮುಖ್ಯವಾಗಿ ಬದುಕಿನ ಭಾಗ ಎಂಬುದಾಗಿ ಪರಿಗಣಿಸ ಬೇಕಾಗಿದೆ. ಮುಂದಿನ ಪೀಳಿಗೆಗೆ ಈ ಪದ್ಧತಿಯನ್ನು ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಆರ್ಯುವೇದ ಪದ್ಧತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರ ನಿಯಮಗಳನ್ನು ಬದುಕಿನಲ್ಲಿ ಪಾಲಿಸಬೇಕು. ಇದರಿಂದ ಆತ್ಮಸ್ಥೈರ್ಯ ವೃದ್ಧಿಯಾಗಿ ಗುಣಾತ್ಮಕ ಯೋಚನೆ ಮೂಡುತ್ತದೆ. ವಿಶಿಷ್ಠ ಕಲಿಕಾ ವಿಧಾನ ವಾಗಿರುವ ಆರ್ಯುವೇದ ವಿಜ್ಞಾನವು ಐಷರಾಮಿ ಬದುಕನ್ನು ಬಿಟ್ಟು ಉತ್ತಮ ವಾದ ಗುಣಾತ್ಮಕ ಅಂಶಗಳನ್ನು ಕಲಿಯಲು ಸಹಕಾರಿಯಾಗಿದೆ. ಆರ್ಯವೇದ ಕಲಿಯುವ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗಾಗಿ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಾಸನ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ರಾವ್ ಪ್ರತಿಜ್ಞಾ ವಿಧಿ ಭೋದಿಸಿದರು. 64 ಸ್ನಾತಕ, 20 ಸ್ನಾತಕೋತ್ತರ ಹಾಗೂ ಇಬ್ಬರು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸ ಲಾಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉತ್ತಮ ಫಲಿತಾಂಶ ಪಡೆದ ಸ್ನಾತಕ ವಿದ್ಯಾರ್ಥಿಗಳಾದ ಡಾ.ರಮ್ಯ, ಅಶ್ವಿನಿ ಅವರಿಗೆ ಚಿನ್ನದ ಪದಕ ನೀಡಲಾಯಿತು.
ವೇದಿಕೆಯಲ್ಲಿ ಹೇಮಾವತಿ ವಿ.ಹೆಗ್ಗಡೆ, ಎಸ್‌ಡಿಎಂ ಆಯುರ್ವೇದ ಏಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಆಯು ರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ., ಸ್ನಾತಕೋತ್ತರ ವಿಭಾಗದ ಡೀನ್ ಡಾ.ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಚೇತ ಕುಮಾರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಜಿ. ಶ್ರೀನಿವಾಸ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.








