ಕೆಎಸ್‌ಸಿಎ ಕ್ರಿಕೆಟ್: ಮಂಗಳೂರು ವಲಯಕ್ಕೆ ಹ್ಯಾಟ್ರಿಕ್ ಗೆಲುವು

ಬೆಂಗಳೂರು, ಜೂ.8: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿರುವ 23 ವರ್ಷ ಕೆಳ ಹರೆಯದವರ ಅಂತರ ವಲಯ ಕ್ರಿಕೆಟ್ ಪಂದ್ಯಾಟಗಳಲ್ಲಿ ಮಂಗಳೂರು ವಲಯ ತಂಡವು ರಾಯಚೂರು, ಶಿವಮೊಗ್ಗ ಮತ್ತು ಧಾರವಾಡ ತಂಡಗಳನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ರಾಬಲ್ಯ ಮೆರೆದಿದೆ.
ಮಂಗಳೂರು ವಲಯ ತಂಡವು ತನ್ನ ಮೊದಲ ಪಂದ್ಯದಲ್ಲಿ ರಾಯಚೂರು ವಲಯ ತಂಡವನ್ನು 7 ವಿಕೆಟುಗಳ ಅಂತರದಿಂದ, ಎರಡನೆಯ ಪಂದ್ಯದಲ್ಲಿ ಶಿವಮೊಗ್ಗ ವಲಯ ತಂಡವನ್ನು 7 ವಿಕೆಟುಗಳ ಅಂತರದಿಂದ ಪರಾಜಯಗೊಳಿಸಿತ್ತು.
ಧಾರವಾಡ ವಲಯದೊಂದಿಗಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗಳೂರು ವಲಯ ತಂಡವು ರಾಮ ಭುತಾನಿಯ ಬಿರುಸಿನ ಅರ್ಧ ಶತಕ (7ಬೌಂಡರಿ, 3 ಸಿಕ್ಸರ್), ಸತ್ಯ ಸ್ವರೂಪ್‌ರ ಅರ್ಧ ಶತಕ ಮತ್ತು ರಕ್ಷಿತ್ (43), ಅಭಿಲಾಷ್ ಶೆಟ್ಟಿ (40)ಯ ಬ್ಯಾಟಿಂಗ್ ನೆರವಿನಿಂದ 45 ಓವರುಗಳಲ್ಲಿ 8 ವಿಕೆಟುಗಳ ನಷ್ಟದಲ್ಲಿ 259 ರನ್‌ಗಳ ಮೊತ್ತವನ್ನು ಕಲೆ ಹಾಕಿತು. ಆಕಾಶ್ ಪತ್ತರ್ 38ಕ್ಕೆ 4 ವಿಕೆಟ್ ಪಡೆದರು. ಪ್ರತಿಹೋರಾಟ ನೀಡಿದ ಧಾರವಾಡ ತಂಡವು 44.5 ಓವರುಗಳಲ್ಲಿ 242 ರನ್‌ಗಳಿಗೆ ಆಲೌಟ್ ಆಗಿ 17 ರನ್‌ಗಳ ಅಂತರದಿಂದ ಸೋಲನ್ನು ಕಂಡಿತು. ಮಂಗಳೂರಿನ ಅಭಿಲಾಷ್ ಶೆಟ್ಟಿ 35ಕ್ಕೆ 4, ನಿಶ್ಚಿತ್ ರಾವ್ 46ಕ್ಕೆ 4 ವಿಕೆಟ್ ಪಡೆದರು.







