ಸಚಿವ ಕೆ.ಜೆ.ಜಾರ್ಜ್ ಹೆಸರಿನಲ್ಲಿ ವಂಚನೆ: ವ್ಯಕ್ತಿಯ ಬಂಧನ

ಬೆಂಗಳೂರು, ಜೂ.8: ಸಚಿವ ಕೆ.ಜೆ.ಜಾರ್ಜ್ ಹೆಸರು ಹೇಳಿಕೊಂಡು ಖಾಸಗಿ ಕಂಪೆನಿಗಳಲ್ಲಿ ಕೆಲಸ ಹಾಗೂ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಾಗನಾಥಪುರದ ಸುಧಾಕರ್(39) ಹಣ ಪಡೆದು ಮೋಸ ಮಾಡಿರುವ ಆರೋಪಿ ಎಂದು ತಿಳಿದುಬಂದಿದೆ.
ನಾಗರಾಜ್ ಎಂಬುವವರಿಗೆ ಪಾನ್‌ಕಾರ್ಡ್ ವಿಚಾರಕ್ಕಾಗಿ ಆರೋಪಿ ಸುಧಾಕರ್ ಪರಿಚಯವಾಗಿದ್ದ. ಆ ವೇಳೆ ನನಗೆ ರಾಜಕಾರಣಿಗಳ ಪರಿಚಯವಿದೆ. ಶಾಲಾ, ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ನನ್ನನ್ನು ಸಂಪರ್ಕಿಸಿ ಎಂದಿದ್ದ. ಆತನ ಮಾತು ನಂಬಿದ್ದ ನಾಗರಾಜ್, ಮಗನನ್ನು ಕ್ರೈಸ್ಟ್ ಅಕಾಡೆಮಿ ಕಾಲೇಜಿನಲ್ಲಿ ಪಿಯುಸಿ ಪ್ರವೇಶಕ್ಕೆ ಸುಧಾಕರ್‌ನನ್ನು ಸಂಪರ್ಕಿಸಿದ್ದು, ಈ ವೇಳೆ, ನನಗೆ ಸಚಿವ ಕೆ.ಜೆ.ಜಾರ್ಜ್ ಪರಿಚಯ ಇದೆ. 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಆದರೆ, 50 ಸಾವಿರ ರೂ.ನೀಡಿದರೂ, ಪ್ರವೇಶ ದೊರೆಯಲಿಲ್ಲ. ಆದರೂ, ಆದರೂ, ನಾಗರಾಜ್ ಅವರ ಮನೆಗೆ ಬಂದು, ಕ್ರೈಸ್ಟ್ ಅಕಾಡೆಮಿಯಲ್ಲಿ ನಿಮ್ಮ ಮಗನಿಗೆ ಸೀಟು ಕೊಡಿಸುವ ಸಲುವಾಗಿ ತುಂಬಾ ಓಡಾಡಿದ್ದೇನೆ. ನನಗೆ 25 ಸಾವಿರ ರೂ. ಕೊಡಬೇಕೆಂದು ಸತಾಯಿಸಿದ್ದ. ಆದರೆ, ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆ ವಸ್ತುಗಳಿಗೆ ಹಾನಿ ಮಾಡಿ, ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ನಾಗರಾಜ್ ದೂರು ದಾಖಲಿಸಿದ್ದರು.
ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಹಳೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







