ಮಾಲ್ದೀವ್ಸ್‌ಗೆ ಪ್ರಧಾನಿ ಮೋದಿ ಬೇಟಿ: ದ್ವಿಪಕ್ಷೀಯ ಮೈತ್ರಿ ವೃದ್ಧಿಗೆ ಹಲವು ಉಪಕ್ರಮಗಳ ನಿರೀಕ್ಷೆ

ಮಾಲೆ, ಜೂ.8: ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ತಮ್ಮ ಪ್ರಪ್ರಥಮ ವಿದೇಶ ಪ್ರವಾಸವಾಗಿ ಮಾಲ್ದೀವ್ಸ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಲೆ ವಿಮಾನ ನಿಲ್ದಾಣದಲ್ಲಿ ಮಾಲ್ದೀವ್ಸ್‌ನ ವಿದೇಶ ಸಚಿವ ಅಬ್ದುಲ್ಲಾ ಶಾಹಿದ್ ಹಾರ್ದಿಕವಾಗಿ ಸ್ವಾಗತಿಸಿದರು.
ಪ್ರಧಾನಿ ಮೋದಿ ಮಾಲೆಗೆ ಆಗಮಿಸಿದ್ದು ಅವರನ್ನು ಮಾಲ್ದೀವ್ಸ್‌ನ ವಿದೇಶ ಸಚಿವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಹಿಂದೆ 2018ರ ನವೆಂಬರ್‌ನಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಸೋಲಿ ಅವರ ಪದಗ್ರಹಣ ಸಮಾರಂಭಕ್ಕೆ ಮೋದಿ ಆಗಮಿಸಿದ್ದರು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಎರಡು ದಿನದ ಮಾಲ್ದೀವ್ಸ್ ಭೇಟಿಯಲ್ಲಿ ಪ್ರಧಾನಿ ಮೋದಿಗೆ ಮಾಲ್ದೀವ್ಸ್‌ನ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಲಾಗುವುದು ಎಂದು ಮಾಲ್ದೀವ್ಸ್‌ನ ವಿದೇಶ ವ್ಯವಹಾರ ಸಚಿವರು ಟ್ವೀಟ್ ಮಾಡಿದ್ದಾರೆ. ಮೋದಿ ಮಾಲ್ದೀವ್ಸ್‌ನ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ದೇಶದ ಉನ್ನತ ಮುಖಂಡರನ್ನು ಭೇಟಿ ಮಾಡಿ ಸಾಮರ್ಥ್ಯ ವೃದ್ಧಿ, ರಕ್ಷಣೆ ಮತ್ತು ಸಹಕಾರ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ರಾಷ್ಟ್ರಗಳ ಮುಖಂಡರು ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು, ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆಯ ಯೋಜನೆಗಳಿಗೆ ಸಾಲದ ವ್ಯವಸ್ಥೆ ಮುಂದುವರಿಕೆ, ಉನ್ನತ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆ, ಅಬಕಾರಿ, ನೌಕಾ ಸಂಚಾರ ಒಪ್ಪಂದದ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.
ಉಭಯ ದೇಶಗಳ ಜನರ ನಡುವಿನ ಸಂಪರ್ಕ ವೃದ್ಧಿಸಲು ಕ್ರಿಕೆಟ್ ರಾಜತಾಂತ್ರಿಕತೆಗೆ ಪ್ರಧಾನಿ ಮೋದಿ ಒಲವು ತೋರಿದ್ದಾರೆ. ಇದರ ಅನ್ವಯ ಮಾಲ್ದೀವ್ಸ್‌ನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಭಾರತ ನೆರವಾಗಲಿದೆ. ಅಲ್ಲದೆ ಕೊಚ್ಚಿಯಿಂದ ಮಾಲ್ದೀವ್ಸ್‌ಗೆ ನೌಕಾ ಸಂಚಾರ ವ್ಯವಸ್ಥೆ ಆರಂಭವಿಸುವ ಯೋಜನೆಯಿದೆ. ಉಭಯ ಮುಖಂಡರೂ ಎರಡು ರಕ್ಷಣಾ ಸಂಬಂಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. (ಸಮುದ್ರ ತೀರದ ಕಣ್ಗಾವಲು ರೇಡಾರ್ ವ್ಯವಸ್ಥೆ ಮತ್ತು ಮಾಲ್ದೀವ್ಸ್‌ನ ರಕ್ಷಣಾ ಪಡೆಗಳ ಸಿಬ್ಬಂದಿಗಳಿಗೆ ಸಂಯುಕ್ತ ತರಬೇತಿ ಕೇಂದ್ರ). ಅಲ್ಲದೆ ಮಾಲ್ದೀವ್ಸ್‌ನ ಮಾಜಿ ಪ್ರಧಾನಿ ಅಬ್ದುಲ್ ಗಯೂಮ್ ಹಾಗೂ ವಿದೇಶ ಸಚಿವ ಶಾಹಿದ್ ಜೊತೆ ಪ್ರಧಾನಿ ಮೋದಿ ಪ್ರತ್ಯೇಕ ಮಾತುಕತೆ ನಡೆಸುವ ನಿರೀಕ್ಷೆಯಿದೆ.







