ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಜೂ.8: ಮೈತ್ರಿ ಸರಕಾರ ಯಾವಾಗ ಬೀಳುತ್ತದೋ ಗೊತ್ತಿಲ್ಲ. ಆದುದರಿಂದ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಲೂಟಿ ಹೊಡೆದು ತಮ್ಮ ಕಿಸೆಗಳನ್ನು ತುಂಬಿಸಿಕೊಳ್ಳುವ ಚಿಂತನೆಯಲ್ಲಿದ್ದಾರೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರಕಾರ ಪತನವಾಗುವುದು ಉತ್ತಮ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಅವರಿಗೆ ಸರಕಾರ ಉಳಿಸಿಕೊಳ್ಳುವ ಚಿಂತೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರವು ಜಿಂದಾಲ್ ಸಂಸ್ಥೆಗೆ ಸಾವಿರಾರು ಎಕರೆ ಭೂಮಿ ಹಂಚಿಕೆ ಮಾಡಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಈ ವಿಷಯದಲ್ಲಿ ದೊಡ್ಡ ಪ್ರಮಾಣದ ಸಂಶಯ ಕಾಡುತ್ತಿದೆ. ಪಾರದರ್ಶಕವಾಗಿ ಭೂಮಿ ಹಂಚಿಕೆ ನಡೆದಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರಕಾರ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಈ ವಿಚಾರದಲ್ಲಿ ಸಮಗ್ರ ತನಿಖೆಯಾಗಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಭೂಮಿ ಪರಭಾರೆಯ ಪ್ರಕ್ರಿಯೆ ನಡೆಯಬಾರದು. ಜಿಂದಾಲ್‌ಗೆ ಭೂಮಿ ಹಂಚಿಕೆ ಮಾಡಿರುವ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಎತ್ತಿರುವ ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ಯಾವುದೇ ಕ್ರಮ ಇಲ್ಲ. ಆದರೆ, ಮಾಜಿ ಸಚಿವ ಆರ್.ರೋಷನ್ ಬೇಗ್, ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ನೇರವಾಗಿ ಹೈಕಮಾಂಡ್‌ಗೆ ದೂರು ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರದ ಆಡಳಿತದಲ್ಲಿ ಭ್ರಷ್ಟಾಚಾರ, ಅಶಿಸ್ತು ಮಿತಿ ಮೀರಿದೆ. ಕಾಂಗ್ರೆಸ್‌ನಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿಯ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಪುಗಾರಿಕೆ, ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ತ್ರಿವಳಿ ತಲಾಕ್ ನಿಷೇಧಿತ ಕಾನೂನು ಜಾರಿಯಾಗಬೇಕಿದೆ ಜೂ.17ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಅಧಿವೇಶನದಲ್ಲಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುತ್ತಿದೆ. ಈ ಹಿಂದೆ ನಾವು ಹೊರಡಿಸಿದ್ದ 10 ಸುಗ್ರೀವಾಜ್ಞೆಗಳಿಗೆ ಕಾನೂನು ಸ್ವರೂಪ ನೀಡಬೇಕಿದೆ ಎಂದು ಅವರು ಹೇಳಿದರು.
ದೇಶದ ಹಿತದೃಷ್ಟಿಯಿಂದ ಕೆಲವು ವಿಧೇಯಕಗಳು ಜಾರಿಗೆ ಬರಬೇಕಿವೆ. ಕೇಂದ್ರ ಸರಕಾರವು ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಸಿದ್ಧವಿದೆ. ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆಯಾಗಬೇಕಿದೆ. ದೇಶದಲ್ಲಿ ತ್ರಿಬಲ್ ತಲಾಕ್(ತ್ರಿವಳಿ ತಲಾಕ್) ನಿಷೇಧಿತ ಕಾನೂನು ಜಾರಿಯಾಗಬೇಕಿದೆ ಎಂದು ಅವರು ಹೇಳಿದರು.
ಗಣಿ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿಯವರ ಭಾಷಣ ಕಾನೂನು ಅತ್ಯಂತ ಪಾರದರ್ಶಕವಾಗಿದೆ. ಗಣಿ ಸುಧಾರಣೆ ಕುರಿತು ಸಭೆಗಳನ್ನು ಮಾಡುತ್ತಿದ್ದೇವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.







