ಅಕ್ರಮ ಚಿನ್ನ ಸಾಗಾಟ: ಮೂರು ಪ್ರಕರಣ ಬೆಳಕಿಗೆ

ಮಂಗಳೂರು, ಜೂ.8: ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಈ ವಾರ ಪತ್ತೆಹಚ್ಚಿದ್ದಾರೆ.
ಜೂ. 4 ಮತ್ತು 5ರಂದು ಪ್ರತ್ಯೇಕ ಪ್ರಕರಣದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಮೂರು ಪ್ರಕರಣದಲ್ಲಿ 25.37 ಲಕ್ಷ ರೂ. ಮೌಲ್ಯದ 764.30 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಪ್ರಕರಣದ ಆರೋಪಿಗಳು ಚಿನ್ನದ ಪೇಸ್ಟ್ ರೂಪವನ್ನು ಒಳ ಉಡುಪಿನಲ್ಲಿ ಅಡಗಿಸಿ ಸಾಗಾಟ ಮಾಡುತ್ತಿದ್ದರೆ, ಮತ್ತೊಂದು ಪ್ರಕರಣದ ಆರೋಪಿಯು ಅಳತೆ ಮಾಡುವ ಟೇಪ್‌ನೊಳಗೆ ಚಿನ್ನ ಸಾಗಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಕ್ರಮಕ್ಕೆ ಬಜ್ಪೆ ಠಾಣೆಯ ಪೊಲೀಸರಿಗೆ ಆರೋಪಿಗಳು ಮತ್ತು ಚಿನ್ನವನ್ನು ಹಸ್ತಾಂತರಿಸಲಾಗಿದೆ.
ಒಂದು ಪ್ರಕರಣದಲ್ಲಿ 21.48 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿ, ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮೊದಲ ಪ್ರಕರಣದಲ್ಲಿ ಏರ್‌ಇಂಡಿಯಾ ಏಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈಯಿಂದ ಬರುತ್ತಿದ್ದ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದಾಗ ಪ್ರಯಾಣಿಕನೊಬ್ಬನ ಬಳಿ 20 ಲಕ್ಷ ರೂ. ಮೌಲ್ಯದ 647 ಗ್ರಾಂ ಚಿನ್ನ ಪತ್ತೆಯಾಗಿದೆ.
ಇನ್ನೊಂದು ಪ್ರಕರಣದಲ್ಲಿ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕ 3.89 ಲಕ್ಷ ರೂ. ಮೌಲ್ಯದ 117.30 ಗ್ರಾಂ ಚಿನ್ನವನ್ನು ಸೂಟ್‌ಕೇಸ್ ಟ್ರೋಲಿಯೊಳಗಿಟ್ಟು ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಆರೋಪಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.







