ಫೇಸ್‌ಬುಕ್‌ನಲ್ಲಿ ಕುಮಾರಸ್ವಾಮಿ-ದೇವೇಗೌಡರ ಬಗ್ಗೆ ಅವಹೇಳನ: ಯುವಕರಿಬ್ಬರ ಬಂಧನ

ಬೆಂಗಳೂರು, ಜೂ.8: ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡಿ, ವಿಡಿಯೊ ಹಂಚಿಕೆ ಮಾಡಿದ್ದ ಆರೋಪದಡಿ ಯುವಕರಿಬ್ಬರನ್ನು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಪುರ ಹೋಬಳಿಯ ಸಿಂಗರಾಜಪುರ ಗ್ರಾಮದ ಕೆಂಪೇಗೌಡ(26) ಹಾಗೂ ಚಾಮರಾಜು(28) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮೇ 23ರಂದು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೊ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೆ ಮಾಡಿದ್ದರು. ಈ ಸಂಬಂಧ ಲೋಕೇಶ್ ಎಂಬುವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದರು.
ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ತನಿಖೆ ಒಪ್ಪಿಸಿದ್ದಾರೆಂದು ಪ್ರಕಟನೆ ತಿಳಿಸಿದೆ.
Next Story





