ವೇಶ್ಯಾವಾಟಿಕೆ ದಂಧೆ: ಇಬ್ಬರ ಬಂಧನ

ಬೆಂಗಳೂರು, ಜೂ.8: ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನ ಫ್ಲಾಟ್‌ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪಡ್ರೆಯ ಗಣೇಶ್‌ನಗರ ನಿವಾಸಿ ಅರುಣ್ ಕೊಟ್ಯಾನ್(47) ಹಾಗೂ ಕೊಲ್ಕತ್ತಾ ಮೂಲದ ಕರಣ್ ಶಾ ಬಂಧಿತರು ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ನಗರ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್‌ನಲ್ಲಿರುವ 14 ನೆ ಮಹಡಿಯಲ್ಲಿ ಫ್ಲಾಟ್ ನಂ.1406 ರಲ್ಲಿ ಹೊರರಾಜ್ಯದಿಂದ ಯುವತಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುತ್ತಾರೆಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 2 ಮೊಬೈಲ್, 10 ಸಾವಿರ ರೂ. ನಗದು ಜಪ್ತಿ ಮಾಡಿ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕಟನೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.





