ತಂದೆಯನ್ನು ಅನುಸರಿಸಿದ ಮಗ ಜಗನ್ ಮೋಹನ್ ರೆಡ್ಡಿ … !

ವಿಜಯವಾಡಾ, ಜೂ.9: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಶನಿವಾರ ಐವರು ಉಪಮುಖ್ಯ ಮಂತ್ರಿಗಳನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದಕ್ಕಾಗಿ ಐವರು ಉಪ ಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿ ಮುಖ್ಯ ಮಂತ್ರಿಯೊಬ್ಬರು ಇಂತಹ ನಿರ್ಧಾರ ಕೈಗೊಂಡಿದ್ದಾರೆ.
25 ಮಂದಿಯ ಸಚಿವ ಸಂಪುಟದಲ್ಲಿ ಉಪಮುಖ್ಯ ಮಂತ್ರಿಯಾಗಿರುವ ದಲಿತ ಸಮುದಾಯಕ್ಕೆ ಸೇರಿದ ಶಾಸಕಿ ಮೆಕಥೋಟಿ ಸುಚಿತ್ರಾ ಅವರಿಗೆ ಗೃಹ ಮತ್ತು ವಿಪತ್ತು ನಿರ್ವಹಣೆ ಖಾತೆಯನ್ನು ನೀಡಲಾಗಿದೆ. ಎರಡನೇ ಬಾರಿ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿರುವ ಸುಚಿತ್ರಾ ಅವರು ಐಆರ್ ಎಸ್ ಅಧಿಕಾರಿಯೊಬ್ಬರ ಪತ್ನಿ.
ಜಗನ್ ಮೋಹನ್ ತನ್ನ ಆಪ್ತರಿಗೆ ಮಣೆ ಹಾಕಿದ್ದಾರೆ. ಆಂಧ್ರದಲ್ಲಿ ಮಹಿಳೆಯೊಬ್ಬರು ಗೃಹ ಸಚಿವರಾಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. 2009ರಲ್ಲಿ ಜಗನ್ ತಂದೆ ವೈ.ಎಸ್.ರಾಜಶೇಖರ್ ರೆಡ್ಡಿ ಮುಖ್ಯ ಮಂತ್ರಿಯಾಗಿದ್ದಾಗ ಪಿ.ಸಬಿತಾ ಇಂದ್ರಾ ರೆಡ್ಡಿ ಆಂಧ್ರಪ್ರದೇಶದಲ್ಲಿ ಗೃಹ ಸಚಿವರಾಗಿ ದಾಖಲೆ ಬರೆದಿದ್ದರು. ಇದೀಗ ತಂದೆ ರಾಜಶೇಖರ್ ರೆಡ್ಡಿ ಕೈಗೊಂಡಿದ್ದ ನಿರ್ಧಾರವನ್ನೇ ಮಗ ಜಗಮೋಹನ್ ರೆಡ್ಡಿ ಮಗ ಜಗನ್ ಮೋಹನ್ ರೆಡ್ಡಿ ಅನುಸರಿಸಿದ್ದಾರೆ.





