ಮರಳು ಮಾಫಿಯಾ ಮಾಹಿತಿ ನೀಡಿದ ಸ್ಥಳೀಯರ ಮೇಲೆ ಹಲ್ಲೆ
ಮಂಗಳೂರು, ಜೂ.9: ಅಡ್ಯಾರ್‌ನಲ್ಲಿ ಮರಳು ಮಾಫಿಯಾ ಅಟ್ಟಹಾಸ ಮುಂದುವರಿದಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಶನಿವಾರ ರಾತ್ರಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿದೆ. ಮೇ 31ರ ಬಳಿಕ ಮರಳುಗಾರಿಕೆಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ಇದರ ಹೊರತಾಗಿಯೂ ಮರಳು ದಂಧೆಕೋರರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ತಹಶೀಲ್ದಾರ್, ಕಂದಾಯ ಅಧಿಕಾರಿ, ವಿವಿಧ ಗ್ರಾಮಗಳ ಗ್ರಾಮ ಕರಣಿಕರು ಹಾಗೂ ಸಿಬ್ಬಂದಿ ಶನಿವಾರ ರಾತ್ರಿ ಅಡ್ಯಾರ್‌ನಲ್ಲಿ ದಾಳಿ ನಡೆಸಿದ್ದರು.
ಈ ಸಂದರ್ಭ ಬೃಹತ್ ಯಂತ್ರ ಬಳಸಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿತ್ತು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ಸ್ಥಳೀಯರು ಅಕ್ರಮ ಮರಳುಗಾರಿಕೆಯ ಬಗ್ಗೆ ದೂರಿದ್ದಾರೆ. ಇದರಿಂದ ಸಿಟ್ಟುಗೊಂಡ ಮರಳು ದಂಧೆಕೋರರು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ವಾರವೂ ಮರಳು ದಂಧೆಕೋರರು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಅಧಿಕಾರಿಗಳ ಚಾಣಾಕ್ಷತೆ: ಅಡ್ಯಾರ್ ಅಕ್ರಮ ಮರಳು ಅಡ್ಡೆಗೆ ರಾತ್ರಿ 12 ಗಂಟೆ ಬಳಿಕ ದಾಳಿ ನಡೆಸುವ ಯೋಜನೆ ಅಧಿಕಾರಿಗಳು ಹೊಂದಿದ್ದರು. ಈ ವಿಷಯ ಮರಳು ಮಾಫಿಯಾಕ್ಕೆ ಗೊತ್ತಾಗಿದೆ. ಇದನ್ನು ಅರಿತ ಅಧಿಕಾರಿಗಳು ತಕ್ಷಣ ದಾಳಿ ನಡೆಸಿದಾಗ ಸ್ಥಳದಲ್ಲಿ 15 ಮರಳು ಲಾರಿಗಳಿದ್ದು ಚಾಲಕರು ಪರಾರಿಯಾಗಿದ್ದಾರೆ. ಎರಡು ಜೆಸಿಬಿ, ಒಂದು ಡ್ರೆಜ್ಜಿಂಗ್ ಯಂತ್ರ ಹಾಗೂ ಒಂದು ಹಿಟಾಚಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ







