ಪುತ್ತೂರು: ಜೂ.15ರಂದು ಬಿಜೆಪಿ ವತಿಯಿಂದ ಸಂಭ್ರಮೋತ್ಸವ, ಅಭಿನಂದನಾ ಸಭೆ

ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಪುತ್ತೂರು ಮೂಲದ ಜನಪ್ರತಿನಿಧಿಗಳ ವಿಜಯೋತ್ಸವ ಸಂಭ್ರಮಾಚರಣೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮವನ್ನು ಜೂ.15ರಂದು ಪುತ್ತೂರಿನಲ್ಲಿ ನಡೆಸುವುದೆಂದು ರವಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಕೇಂದ್ರ ಸಚಿವರಾಗಿರುವ ಡಿ.ವಿ.ಸದಾನಂದ ಗೌಡ, ದೊಡ್ಡ ಪ್ರಮಾಣದ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ನಳಿನ್‍ಕುಮಾರ್ ಕಟೀಲು ಮತ್ತು ಎರಡನೇ ಬಾರಿ ಲೋಕಸಭೆ ಪ್ರವೇಶಿಸಿರುವ ಶೋಭಾ ಕರಂದ್ಲಾಜೆ ಅವರ ವಿಜಯೋತ್ಸವ ಸಂಭ್ರಮಾಚರಣೆ ನಡೆಸುವ ಹಾಗೂ ಮತದಾರರಿಗೆ ಅಭಿನಂದನಾ ಸಭೆ ಹಮ್ಮಿಕೊಳ್ಳುವ ಸಲುವಾಗಿ ಪೂರ್ವಭಾವಿ ಸಭೆ ರವಿವಾರ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜೂನ್15ರಂದು ಬೆಳಿಗ್ಗೆ ನಗರದ ದರ್ಬೆಯಿಂದ ಬೊಳುವಾರು ತನಕ ಮುಖ್ಯ ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸುವುದು . ಬಳಿಕ ಪುತ್ತೂರಿನ ಬಂಟರ ಭವನದಲ್ಲಿ ವಿಜಯೋತ್ಸವ ಮತ್ತು ಮತದಾರರಿಗೆ ಅಭಿನಂದನಾ ಸಮಾರಂಭ ನಡೆಸುವುದೆಂದು ತೀರ್ಮಾನಿಸಲಾಯಿತು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಶಂಭು ಭಟ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಹಾರಾಡಿ ಮತ್ತು ಗೌರಿ ಬನ್ನೂರು, ಪಕ್ಷದ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ಅಪ್ಪಯ್ಯ ಮಣಿಯಾಣಿ, ವಿಶ್ವೇಶ್ವರ ಭಟ್ ಬಂಗಾರಡ್ಕ, ಸುನೀಲ್ ದಡ್ಡು, ಯುವರಾಜ್ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸುರೇಶ್ ಭಟ್,ವಿಶ್ವನಾಥ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.







