ಹಿರಿಯ ಲೇಖಕ ಎನ್.ಪಿ.ಆಚಾರ್ಯ ನಿಧನ

ಕುಂದಾಪುರ, ಜೂ. 9: ಕನ್ನಡ ಮತ್ತು ಆಂಗ್ಲ ಭಾಷೆಗಳ ಹಿರಿಯ ಲೇಖಕ, ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕ ಪ್ರೊ. ನೇರಂಬಳ್ಳಿ ಪ್ರಭಾಕರ ಆಚಾರ್ಯ(ಎನ್.ಪಿ.ಆಚಾರ್ಯ) ದೀರ್ಘಕಾಲದ ಅಸೌಖ್ಯದ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
1964ರಲ್ಲಿ ಮುಂಬೈ ವಿವಿಯಿಂದ ಎಂ.ಎ. ಪದವಿ ಪಡೆದಿದ್ದ ಎನ್‌ಪಿ.ಆಚಾರ್ಯ, 1968ರಿಂದ 1997ರವರೆಗೆ ಮುಂಬೈ ಚರ್ಚ್‌ಗೇಟ್‌ನ ಕೆ.ಸಿ. ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿದ್ದವರು ಸೇವಾ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ಕೋಟೇಶ್ವರದಲ್ಲಿ ನೆಲೆಸಿದ್ದರು.
ಇಂಗ್ಲಿಷ್ ಮತ್ತು ಕನ್ನಡ ಭಾಷೆಗೆಳೆಡರಲ್ಲೂ ಉತ್ತಮ ಬರಹಗಾರರಾಗಿದ್ದ ಆಚಾರ್ಯರು, ಆಂಗ್ಲ ಭಾಷೆಯಲ್ಲಿ ‘ದಿ ಸುರಗಿ ಟ್ರೀ’, ‘ಮನು ಇನ್ ಕಿಷ್ಕಿಂಧಾ’, ‘ಎಸೆನ್ಸ್ ಇನ್ ಕ್ರಿಟಿಸಿಸಂ’ ಹಾಗೂ ಕನ್ನಡದಲ್ಲಿ ‘ಕವಿತೆಯ ಓದು’ ಕೃತಿಗಳನ್ನು ರಚಿಸಿದ್ದಾರೆ.
ಅವರ ‘ಕವಿತೆಯ ಓದು’ ಕೃತಿಗೆ 2013ರ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿತ್ತು. ಅನಾರೋಗ್ಯದ ನಡುವೆಯೂ ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಆಚಾರ್ಯರು ಕೃಷ್ಣನನ್ನು ಕುರಿತ ‘ಗಾಡ್ ಆಫ್ ಲವ್’ ಕೃತಿಯ 11 ಅಧ್ಯಾಯಗಳನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದರು. ಚಿಕ್ಕಂದಿನಿಂದಲೂ ಕತೆ ಹೇಳುವುದೆಂದರೆ ತನಗೆ ತುಂಬಾ ಇಷ್ಟ ಎಂದು ಇತ್ತೀಚೆಗೆ ಅವರು ಲೇಖನವೊಂದರಲ್ಲಿ ಬರೆದುಕೊಂಡಿದ್ದರು.







