ಭಾವನಾತ್ಮಕ ಪ್ರಜಾಪ್ರಭುತ್ವ ದೇಶಕ್ಕೆ ಅಪಾಯ: ಜ್ಞಾನಪ್ರಕಾಶ ಸ್ವಾಮೀಜಿ

ಮೈಸೂರು,ಜೂ.9: ಸರ್ವಾಂಗೀಣ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಮಹತ್ವ ಪಡೆದಿದೆ. ಆದರೆ ರಾಷ್ಟ್ರೀಯತೆ ಆಧಾರದಲ್ಲಿ ಭಾವನಾತ್ಮಕವಾಗಿ ಪ್ರಜಾಪ್ರಭುತ್ವವನ್ನು ಗೊಲ್ಲೆಬ್ಬಿಸುವುದು ದೇಶಕ್ಕೆ ಅಪಾಯಕಾರಿ ಎಂದು ಉರಿಲಿಂಗಿ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಆಲ್ ಇಂಡಿಯಾ ಬ್ಯಾಂಕ್ ಆಫ್ ಇಂಡಿಯಾ ಎಸ್ಸಿ, ಎಸ್ಟಿ, ಒಬಿಸಿ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ಡಾ.ಬಾಬಾ ಸಾಹೇಬ್ ಅವರ 128ನೇ ಜಯಂತಿ ಮಹೋತ್ಸವ ಆಚರಣೆ ಮತ್ತು ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾವಾನಾತ್ಮಕ ಪ್ರಜಾಪ್ರಭುತ್ವ ಅಪಾಯ, ಧರ್ಮದ ಹೆಸರಿನಲ್ಲಿ ಪ್ರಜಾಪ್ರಭುತ್ವ ನಡೆಸುವುದು ಅತ್ಯಂತ ಅಪಾಯಕಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದೇ ಆದರೆ ಧರ್ಮದ ಹೆಸರಿನಲ್ಲಿ ಪ್ರಜಾಪ್ರಭುತ್ವ ನಡೆದರೆ ಅದು ದೇಶಕ್ಕೆ ದೊಡ್ಡ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಬ್ಯಾಂಕಿಂಗ್ ಸಿಸ್ಟಮ್‍ನಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಗಮಕ್ಕೆ ಕಾರಣರಾದವರು. ಎಸ್ಸಿ, ಎಸ್ಟಿ, ಓಬಿಸಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮದಿಂದ ಮತ್ತು ಅವರು ಕೊಟ್ಟ ಸಂವಿಧಾನದಿಂದ ಘನತೆಯಿಂದ ಬದುಕು ನಡೆಸುತ್ತಿದ್ದಾರೆ. ಸಂವಿಧಾನಕ್ಕೆ ಅಪಾಯ ಬಂದಾಗ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಸಮಸ್ತ ಭಾರತೀಯರು ಎದ್ದು ನಿಲ್ಲಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಗಮಿಸಿದ್ದರು. ಸಹಾಯಕ ಪೊಲೀಸ್ ಆಯುಕ್ತ ಗೋಪಾಲ್, ಬ್ಯಾಂಕ್ ಆಫ್ ಇಂಡಿಯಾದ ನ್ಯಾಷನಲ್ ಪ್ರೆಸಿಡೆಂಟ್ ಸಂಗರಾಜ್ ಎಸ್.ಕೆ.ಪಾಟೀಲ್, ಜನರಲ್ ಸೆಕ್ರೆಟರಿ ಮನೋಜ್ ಗೋಯಲ್, ಬ್ಯಾಂಕ್ ಆಪ್ ಇಂಡಿಯಾ ಆಫಿಸರ್ಸ್ ಅಸೋಷಿಯೇಷನ್ ರಾಜ್ಯಾಧ್ಯಕ್ಷ ಮೋಹನ್ ಕುಮಾರ್, ಬೆಂಗಳೂರು ವಲಯ ಡಿಜಿಎಂ ಪ್ರಮೋದ್ ಕುಮಾರ್ ಬತ್ತಲ್, ಹುಬ್ಬಳ್ಳಿ ವಲಯ ಡಿಜಿಎಂ ರಾಮಕೃಷ್ಣ, ಬ್ಯಾಂಕ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಕೃಷ್ಣ ಬಿ., ಜನರಲ್ ಸೆಕ್ರೆಟರಿ ಬಿ.ಪರುಶರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







