ಶ್ರೀಲಂಕಾ ಅಧ್ಯಕ್ಷರಿಂದ ಪ್ರಧಾನಿಗೆ ಬುದ್ಧನ ಅಪೂರ್ವ ಪ್ರತಿಮೆಯ ಉಡುಗೊರೆ

ಕೊಲಂಬೊ,ಜೂ.9: ಶ್ರೀಲಂಕಾ ಪ್ರವಾಸದ ಹಿನ್ನೆಲೆಯಲ್ಲಿ ರವಿವಾರ ಕೊಲಂಬೊಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಧ್ಯಾನಭಂಗಿಯಲ್ಲಿರುವ ಬುದ್ಧನ ಪ್ರತಿಮೆಯೊಂದನ್ನು ಉಡುಗೊರೆಯಾಗಿ ನೀಡಿದರು.
‘‘ಧ್ಯಾನಸ್ಥಿತಿಯಲ್ಲಿರುವ ಬುದ್ಧನ ಪ್ರತಿಮೆಯನ್ನು ಬಿಳಿತೇಗದ ಮರದಿಂದ ಕೆತ್ತಲಾಗಿದೆ. ಈ ಅಪೂರ್ವ ಕಲಾಕೃತಿಯ ನಿರ್ಮಾಣವನ್ನು ಪೂರ್ಣಗೊಳಿಸಲು ಹೆಚ್ಚುಕಮ್ಮಿ ಎರಡು ವರ್ಷಗಳೇ ಬೇಕಾದವು’’ ಎಂದು ಭಾರತದ ಪ್ರಧಾನಿ ಕಾರ್ಯಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಧ್ಯಾನಸ್ಥ ಬುದ್ಧನ ಪ್ರತಿಮೆಯ ಮೂಲವಿಗ್ರಹವು ಅನುರಾಧಪುರ ರಾಜಾಡಳಿತ ಯುಗದ ಅತ್ಯುತ್ತಮ ಕಲಾಕೃತಿಯೆನಿಸಿಕೊಂಡಿದೆ.ಈ ಮೂಲ ಪ್ರತಿಮೆಯನ್ನು ಕ್ರಿ.ಶ. 4ರಿಂದ 7ನೇ ಶತಮಾನದ ನಡುವೆ ನಿರ್ಮಿಸಲಾಗಿದೆ’’ ಎಂದು ಭಾರತೀಯ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಈ ಕಲಾಕೃತಿಯ ಪ್ರತಿಕೃತಿಯನ್ನು ನಿರ್ಮಿಸಿ ಪ್ರಧಾನಿ ಮೋದಿಯವರಿಗೆ ಸಮರ್ಪಿಸಲಾಗಿದೆ.
ಪ್ರಧಾನಿ ಮೋದಿ ಇಂದು ಅಧ್ಯಕ್ಷ ಸಿರಿಸೇನಾ ಜೊತೆಗೆ ದ್ವಿಪಕ್ಷೀಯ ಮಾತುಕತೆಗಳನ್ನು ಕೂಡಾ ನಡೆಸಿದರು. ‘‘ಈ ಬುದ್ಧ ವಿಗ್ರಹವು ವಿಶೇಷ ಸ್ನೇಹಿತನಿಂದ ದೊರೆತ ವಿಶೇಷ ಉಡುಗೊರೆಯಾಗಿದೆ’’ ಎಂದು ಪ್ರಧಾನಿ ಕಾರ್ಯಾಲಯ ಬಣ್ಣಿಸಿದೆ.







