ಪ್ರತಿ ಸೋಮವಾರ ಹೋಬಳಿಗೆ ಭೇಟಿ: ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ, ಜೂ.10: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸೋಮವಾರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ನೂತನ ಕಚೇರಿಯ ಉದ್ಘಾಟನೆಯನ್ನು ಪಕ್ಷದ ಹಿರಿಯ ಮುಖಂಡರಾದ ಸೋಮಶೇಖರ್ ಭಟ್ ನೆರವೇರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಮುಂದಿನ ಐದು ವರ್ಷಗಳ ಕಾಲ ಪ್ರತಿ ಸೋಮವಾರ ಉಡುಪಿ ಹಾಗೂ ಮಂಗಳವಾರ ಚಿಕ್ಕಮಗಳೂರು ಕಚೇರಿಯಲ್ಲಿದ್ದು, ಜನರ ಅಹವಾಲು ಸ್ವೀಕರಿಸ ಲಾಗುವುದು. ಮಧ್ಯಾಹ್ನ ನಂತರ ಒಂದು ಹೋಬಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಾಗುವುದು ಮತ್ತು ಅಧಿಕಾರಿಗಳ ಸಭೆಗಳನ್ನು ನಡೆಸ ಲಾಗುವುದು ಎಂದರು.
ಕ್ಷೇತ್ರದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಕ್ಷೇತ್ರಕ್ಕೆ ಮಂಜೂರಾದ ಸಂಸ್ಥೆಗಳಿಗೆ ಪೂರ್ಣಪ್ರಮಾಣದ ಕಟ್ಟಡ ನಿರ್ಮಿಸಲಾಗುವುದು. ಕೊಂಕಣ ರೈಲ್ವೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಲಾಗುವುದು. ಕೋಡಿಕನ್ಯಾಣ, ಹೆಜಮಾಡಿಯಲ್ಲಿ ಪೂರ್ಣ ಪ್ರಮಾಣದ ಬಂದರನ್ನು ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ.ಸುನಿಲ್ ಕುಮಾರ್, ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷ ಶೀಲಾ ಕೆ.ಶೆಟ್ಟಿ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶೋಭಾ ಸಂತಾಪ
ನಾಡಿನ ಸಾಹಿತಿ, ಕಲಾವಿದ ಗಿರೀಶ್ ಕಾರ್ನಡ್ ನಮ್ಮನ್ನು ಅಗಲಿರುವುದು ಅತೀವ ನೋವು ಹಾಗೂ ದುಃಖ ತಂದಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ನಾಡಿನ ಪುತ್ರ ಇನ್ನು ನಮ್ಮ ಜೊತೆ ಇಲ್ಲ. ಇವರ ನಿಧನಕ್ಕೆ ಸಂತಾಪ ಸೂಚಿಸ ಲಾಗುವುದು ಎಂದು ಸಂದೆ ಶೋಭಾ ಕರಂದ್ಲಾಜೆ ತಿಳಿಸಿದರು.







