ಭೂಸ್ವಾಧೀನ ಕಾಯ್ದೆ ಹಿಂಪಡೆಯಲು ಆಗ್ರಹ: ಜಿಲ್ಲಾ ರೈತ ಸಂಘದಿಂದ ರಸ್ತೆ ತಡೆ, ಪ್ರತಿಭಟನೆ

ಪುತ್ತೂರು : ರಾಜ್ಯದ ಮೈತ್ರಿ ಸರ್ಕಾರ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ಭೂಸ್ವಾಧೀನ ಕಾಯ್ದೆ ರೈತರ ಪಾಲಿಗೆ ಮರಣಶಾಸನವಾಗಿದ್ದು, ಈ ಕಾಯ್ದೆಯನ್ನು ಸರ್ಕಾರ ಹಿಂಪಡೆಯದಿದ್ದರೆ ಜಿಲ್ಲಾಬಂದ್ ಮೂಲಕ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಸಂಘ-ಹಸಿರುಸೇನೆಯ ಜಿಲ್ಲಾಧ್ಯಕ್ಷ ಬಿ. ಶ್ರೀಧರ್ ಶೆಟ್ಟಿ ಎಚ್ಚರಿಸಿದರು.
ಅವರು ಪುತ್ತೂರು ಮಾಣಿ ಮೈಸೂರು ರಸ್ತೆಯ ದರ್ಬೆ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ವತಿಯಿಂದ ಸೋಮವಾರ ನಡೆದ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಮಾತನಾಡಿದರು.
ಸರ್ಕಾರ ತಿದ್ದುಪಡಿ ಮಾಡಿದ ಈ ಕಾಯ್ದೆ ಕೃಷಿಕರ ಮೇಲಿನ ಗದಾಪ್ರಹಾರವಾಗಿದೆ. ರೈತರಿಗೆ 'ಭಿಕ್ಷೆ' ಹಾಕಿ ರೈತರ ಒಪ್ಪಿಗೆ ಇಲ್ಲದೆ ಭೂಸ್ವಾದೀನ ಅವಕಾಶ ಜಿಲ್ಲಾಧಿಕಾರಿ ಅವರಿಗೆ ನೀಡುವ ಮೂಲಕ ಬ್ರಿಟೀಷರ ಕಾಲದ ಕಾನೂನನ್ನು ಜಾರಿಗೊಳಿಸಿ ಭೂಮಿಯ ಮಕ್ಕಳ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಮೈತ್ರಿ ಸರ್ಕಾರ ನಡೆಸಿದ ಈ ಕಾರ್ಯಕ್ಕೆ ವಿರೋಧಪಕ್ಷವಾದ ಬಿಜೆಪಿ ಕೂಡಾ ಮೌನವಾಗಿದ್ದು, ಬೆಂಬಲ ನೀಡಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ರೈತರ ಸಮಸ್ಯೆ ಬಗ್ಗೆ ಚಿಂತನೆ ಮಾಡದೆ ಕೇವಲ 'ಪಟ್ಟಣ'ಗಳಿಗೆ ಸೀಮಿತವಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕೊಳೆರೋಗದ ಪರಿಹಾರ ಸಮರ್ಪಕವಾಗಿ ಜನತೆಯ ಕೈಸೇರಿಲ್ಲ. ಇತ್ತ ಬರದಿಂದ ಈ ಬಾರಿಯೂ ಅಡಕೆ ಕೃಷಿ ನಾಶವಾಗಿದೆ. ಮರಳು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಎಲ್ಲಾ ರೈತರ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ತಕ್ಷಣ ರೈತರ ಸಭೆಯನ್ನು ಕರೆಯಬೇಕು ಎಂದು ಅವರು ಆಗ್ರಹಿಸಿದರು.
ರೈತ ಸಂಘ-ಹಸರುಸೇನೆಯ ಕಡಬ ತಾಲೂಕು ಸಮಿತಿಯ ಅಧ್ಯಕ್ಷ ವಿಕ್ಟರ್ ಕಡಬ ಮಾತನಾಡಿ, ರಾಜ್ಯದಲ್ಲಿ ಹಕ್ಕುಗಳನ್ನು ಹೋರಾಟದ ಮೂಲಕವೇ ಪಡೆಯಬೇಕಾದ ದುಸ್ಥಿತಿ ನಮ್ಮದ್ದಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಅಸಡ್ಡೆ ತೋರಿಸುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವಾಗ ಯಾವುದೇ ಮಾನದಂಡ ಇರಲಿಲ್ಲ. ಈಗ ಮಾನದಂಡ ಅಳವಡಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತದೆ. ತಕ್ಷಣ ಈ ಸಾಲಮನ್ನಾದ ಮಾನದಂಡ ರದ್ದು ಮಾಡಬೇಕು. ಮರಳು ನೀತಿಯಿಂದ ಜಿಲ್ಲೆಯ ನದಿತಟದಲ್ಲಿರುವ ರೈತರಿಗೂ ಮರಳು ಸಿಗದಂತಾಗಿದೆ. ತಕ್ಷಣ ಗ್ರಾಮಪಂಚಾಯಿತಿಗಳಿಗೆ ಮರಳು ಪರವಾನಿಗೆ ನೀಡುವ ಅಧಿಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆ ಬರಪೀಡಿತ ಘೋಷಣೆಗೆ ಆಗ್ರಹ
ಜಿಲ್ಲೆಯಲ್ಲಿ ಭೀಕರ ಜಲಕ್ಷಾಮ ಉದ್ಭವಿಸಿದೆ. ಕುಡಿಯುವ ನೀರಿಗೆ ಎಲ್ಲೆಡೆ ಅಭಾವವಾಗಿದೆ. ಜಿಲ್ಲೆಯ ರೈತರ ಅಡಕೆ ಬೆಲೆ ನಾಶವಾಗಿದೆ. ಹಾಗಾಗಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರೈತಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘ ಹಸಿರುಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹರಿಣಾ ವಿ.ರೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕೇಶವ ಪೂಜಾರಿ, ಬಂಟ್ವಾಳ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಇದಿನಬ್ಬ, ಪುತ್ತೂರು ತಾಲೂಕು ಸಂಘದ ಕಾರ್ಯದರ್ಶಿ ವಸಂತ ಪೆರಾಬೆ, ಪುಣಚ ವಲಯ ಅಧ್ಯಕ್ಷ ಈಸುಬು, ಸುರೇಶ್ ಭಟ್ ಕನ್ಯಾನ ಮತ್ತಿತರರು ಉಪಸ್ಥಿತರಿದ್ದರು.







