ಗಿರೀಶ್ ಕಾರ್ನಾಡ್ ನಿಧನಕ್ಕೆ ರಥಬೀದಿ ಗೆಳೆಯರು ಸಂತಾಪ
ಉಡುಪಿ, ಜೂ.10: ಕರ್ನಾಟಕದ ಇತಿಹಾಸ, ಭಾರತೀಯ ಪುರಾಣಗಳನ್ನು ಆಧರಿಸಿ ನಾಟಕಗಳನ್ನು ಬರೆದ ಗಿರೀಶ್ ಕಾರ್ನಾಡ್, ಕನ್ನಡ, ಭಾರತೀಯ ಹಾಗೂ ಜಾಗತಿಕ ರಂಗಭೂಮಿಯ ಮಹತ್ವದ ನಾಟಕಕಾರರು. ರಥಬೀದಿ ಗೆಳೆಯರು ಸಂಘಟನೆಯ ಹಲವು ವಿಚಾರಗೋಷ್ಠಿಗಳಲ್ಲಿ ಕಾರ್ನಾಡರು ಭಾಗವಹಿಸಿದ್ದರು. ಗಿರೀಶ್ ಕಾರ್ನಾಡರ ನಿಧನಕ್ಕೆ ರಥಬೀದಿ ಗೆಳೆಯರು ಸಂಘಟನೆ ಶೃದ್ದಾಂಜಲಿಯನ್ನು ಅರ್ಪಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಮುರಳೀಧರ ಉಪಾಧ್ಯ ಹಿರಿಯಡಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನುಡಿನಮನ
ರಥಬೀದಿ ಗೆಳೆಯರು ವತಿಯಿಂದ ಗಿರೀಶ್ ಕಾರ್ನಾಡರಿಗೆ ನಾಳೆ ಸಂಜೆ 4:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದ್ದು, ಸಾಹಿತ್ಯಾಸಕ್ತರು ಹಾಗೂ ಕಾರ್ನಾಡ್ ಅಭಿಮಾನಿಗಳು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೋವಿಂದ ಪೈ ಸಂಶೋಧನ ಕೇಂದ್ರ
ಜ್ಞಾನಪೀಠ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಹಾಗೂ ಹಿರಿಯ ಲೇಖಕ ಪ್ರೊ. ಪ್ರಬಾಕರ ಆಚಾರ್ಯ ಇವರ ನಿಧನಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಸಂತಾಪ ವ್ಯಕ್ತಪಡಿಸಿದೆ.
ಡಾ. ಕಾರ್ನಾಡ್ ಅವರು ತಮ್ಮ ನಾಟಕ, ಸಿನೆಮಾ ಮತ್ತು ವೈಚಾರಿಕ ಗದ್ಯದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ನಾಟಕಗಳಂತೂ ಆಧುನಿಕ ರಂಗಭೂಮಿಯಲ್ಲಿ ಹೊಸ ಹೆಜ್ಜೆಗಳನ್ನು ಮೂಡಿಸಿದೆ.
ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದ ಪ್ರೊ. ಪ್ರಬಾಕರ ಆಚಾರ್ಯ ಇಂಗ್ಲಿಷ್ ಕಾದಂಬರಿ ಹಾಗೂ ವಿಮರ್ಶಾ ಲೇಖನಗಳಿಂದ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ದಾಖಲಿಸಿದ್ದರು. ಇವರಿಬ್ಬರ ನಿಧನ ಸಾರಸ್ವತ ಲೋಕಕ್ಕೆ ದೊಡ್ಡನಷ್ಟ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ
ಜ್ಞಾನಪೀಠ ಪ್ರಶಸ್ತಿ ವಿಜೇತ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಒಬ್ಬ ಅತ್ಯುತ್ತಮ ಸಾಹಿತಿಯನ್ನು ನಾಡು ಕಡೆದುಕೊಂಡಿದ್ದು, ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಅವರು ಸಂತಾಪ ಸಂದೇಶದಲ್ಲಿ ತಿಲಿಸಿದ್ದಾರೆ.







