ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮುಂದೂಡದಿದ್ದರೆ ಹೋರಾಟ: ಡಾ.ಭರತ್ ಶೆಟ್ಟಿ ಎಚ್ಚರಿಕೆ

ಮಂಗಳೂರು, ಜೂ.10: ಪ್ರಾಪರ್ಟಿ ಕಾರ್ಡ್ ಕೊಡುವ ಕಚೇರಿಯೇ ಸುವ್ಯವಸ್ಥಿತವಾಗಿಲ್ಲ. ಇಂಟರ್‌ನೆಟ್, ಸರ್ವರ್ ಸಮಸ್ಯೆಯಿಂದ ಜನರು ಬೆಳಗ್ಗಿನಿಂದ ಸಂಜೆಯವರೆಗೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಇದರ ನಡುವೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿ ಮಂಗಳೂರು ಉತ್ತರ ಕ್ಷೇತ್ರದ ಜನತೆಯನ್ನು ಸಂಕಷ್ಟಕ್ಕೆ ದೂಡುವದನ್ನು ಸಹಿಸುವುದಿಲ್ಲ. ತಕ್ಷಣ ಕಡ್ಡಾಯವನ್ನು ಮುಂದೂಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಎಚ್ಚರಿಕೆ ನೀಡಿದ್ದಾರೆ.
ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ಪ್ರಾಯೋಗಿಕವಾಗಿ ಮಂಗಳೂರು ಉತ್ತರದಲ್ಲಿ ಅನುಷ್ಠಾನ ಬೇಡ. ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಒಳಪಡುವ ಸುರತ್ಕಲ್ ಪ್ರದೇಶದಲ್ಲಿ ಮನೆ, ವಾಣಿಜ್ಯ, ವಾಸ,ಅಂಗಡಿ ಸಹಿತ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಪ್ರಾಪರ್ಟಿ ಕಾರ್ಡ್ ಸಿಗಬೇಕಿದೆ. ಕೇವಲ ಶೇ 10 ರಷ್ಟು ಮಾತ್ರ ಪೂರ್ಣವಾಗಿದೆ ಎಂದರು.
ಇನ್ನುಳಿದಂತೆ ದಿನಕ್ಕೆ ಮೂರ್ನಾಲ್ಕು ಪ್ರಾಪರ್ಟಿ ಕಾರ್ಡ್ ಮಾಡಲು ಟೋಕನ್ ಸಿಗುತ್ತದೆ. ಮತ್ತೆ ಒಂದೆರಡು ತಿಂಗಳು ಕಾದು ಪ್ರಾಪರ್ಟಿ ಕಾಡ್ ಬರುವಾಗ ಈ ನಡುವೆ ಜನ ಸಾಮಾನ್ಯರು ಸಾಲ, ಉನ್ನತ ಶಿಕ್ಷಣಕ್ಕೆ ಸಾಲ, ಮಾರಾಟ ಮತ್ತಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಹೀಗಾಗಿ ಶಿವಮೊಗ್ಗ ಮಾದರಿಯಲ್ಲಿ ಶೇ.80ರಷ್ಟು ಅನುಷ್ಠಾನಗೊಳಿಸಿ ಮತ್ತೆ ಕಡ್ಡಾಯದ ಚಿಂತನೆ ನಡೆಸಿ ಎಂದು ಸಲಹೆ ನೀಡಿದರು.
ಪ್ರಾಪರ್ಟಿ ಕಾರ್ಡ್ ಯೋಜನೆಯಲ್ಲಿ ಹಲವಾರು ಲೋಪ ದೋಷಗಳಿದ್ದು, ಅದರ ಅನುಷ್ಠಾನದಿಂದ ಹಲವಾರು ಸಮಸ್ಯೆಗಳು ಉದ್ಭವಿಸಲಿದೆ. ಸರಕಾರ ರಾಜ್ಯದ ಬೇರೆ ಕಡೆ ಅನುಷ್ಠಾನಗೊಳಿಸಿ ಯಶಸ್ವಿಯಾದ ಬಳಿಕ ನನ್ನ ಕ್ಷೇತ್ರದಲ್ಲಿ ಜಾರಿಗೆ ತರಲಿ, ಅದರ ಮೊದಲು ನಾನು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉತ್ತರ ಮಂಡಲ ಉಪಾಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಕುಡುಪು, ಸಂದೀಪ್ ಪಚ್ಚನಾಡಿ, ನ್ಯಾಯವಾದಿಗಳಾದ ರವಿ ಪ್ರಸನ್ನ ಸಿ.ಕೆ., ಸುಜಯ್ ಶೆಟ್ಟಿ, ಲೋಕೇಶ್ ಬೊಳ್ಳಾಜೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಪರ್ಟಿ ಕಾರ್ಡ್ ಮಾಡುವ ಕೇಂದ್ರವೇ ರೋಗಗ್ರಸ್ಥವಾಗಿದೆ. ಇಂಟರ್‌ನೆಟ್, ಸರ್ವರ್ ಸಮಸ್ಯೆಯನ್ನು ಸರಿಪಡಿಸಿಲ್ಲ. ಸರ್ವರ್‌ಗಳ ಕೊರತೆಯಿದೆ. ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಜನರಿಗೆ ಆಸನ, ಶೌಚಾಲಯದಂತಹ ವ್ಯವಸ್ಥೆಯೇ ಇಲ್ಲ. ಇದರ ನಡುವೆ ಕಡ್ಡಾಯ ಮಾಡಿರುವುದರಿಂದ ಅರಾಜಕತೆ ಸೃಷ್ಟಿಯಾದರೆ ಸರಕಾರವೇ ಹೊಣೆ.
- ಡಾ.ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ಉತ್ತರ ಕ್ಷೇತ್ರ







