ನಿಫಾ ವೈರಸ್ ಬಗ್ಗೆ ಎಚ್ಚರ ವಹಿಸಲು ಸಚಿವ ಖಾದರ್ ಸೂಚನೆ

ಮಂಗಳೂರು, ಜೂ.10: ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಾಣು ಜ್ವರ ಪತ್ತೆಯಾಗಿದ್ದರಿಂದ ದ.ಕ.ಡ ಜಿಲ್ಲೆಯಲ್ಲಿ ಜನರಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಹಿತ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಕ್ರಮಕೈಗೊಳ್ಳಬೇಕು ಮತ್ತು ಹಣ್ಣು ಹಂಪಲು ಮಾರಾಟ ಗಾರರ ಸಭೆ ಕರೆದು ಅವರಲ್ಲೂ ಉತ್ತಮ ಗುಣಮಟ್ಟದ ಹಣ್ಣು ಹಂಪಲು ಮಾರಾಟ ಮಾಡಲು ಸೂಕ್ತ ನಿರ್ದೇಶನ ನೀಡಿ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಣ್ಣುಗಳನ್ನು ಸೇವಿಸುವ ಮುನ್ನ ಎಚ್ಚರವಹಿಸಿ. ಮಾರುಕಟ್ಟೆಯಿಂದ ತಂದಿರುವ ಹಣ್ಣುಗಳನ್ನು ನೇರವಾಗಿ ಸೇವಿಸದೆ ನೀರಿನಿಂದ ಶುಚಿಗೊಳಿಸಿದ ನಂತರವೇ ಸೇವಿಸಿಬೇಕು. ಪ್ರಾಣಿ, ಪಕ್ಷಿಗಳಿಂದ ವೈರಸ್ ನಿಫಾ ವೈರಸ್ ಹರಡುವುದರಿಂದ ಎಚ್ಚರ ವಹಿಸಿಕೊಳ್ಳಬೇಕು. ಹಣ್ಣು ಹಂಪಲು ಅಂಗಡಿಗಳಲ್ಲಿ ಹಣ್ಣುಗಳ ಜೊತೆಗೆ ನಿಫಾ ವೈರಸ್ ಕುರಿತು ಭಿತ್ತಿಚಿತ್ರವನ್ನು ನೀಡಿ ಜನತೆಗೆ ಜ್ವರದ ಬಗ್ಗೆ ಮಾಹಿತಿ ನೀಡಿ ಎಂದರು.
ಶಾಲಾ-ಕಾಲೇಜುಗಳಲ್ಲಿ ವೈರಸ್ ಹರಡುವ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು. ತಾಲೂಕು ಮಟ್ಟದ ಲ್ಯಾಬ್ಗಳಲ್ಲಿ ಸಿಬ್ಬಂದಿ ಕೊರತೆ ಇದ್ದಲ್ಲಿ ಅದಷ್ಟೂ ಬೇಗನೆ ಭರ್ತಿ ಮಾಡಿ ಜನರು ಕಾಯಿಲೆಯ ಬಗ್ಗೆ ಭೀತರಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ಸಚಿವ ಖಾದರ್ ಸೂಚಿಸಿದರು.
ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ನೀರನ್ನು ಸಂಗ್ರಹಿಸಿಡಬಾರದು. ಜ್ವರ ಪ್ರಕರಣವರದಿಯಾದರೆ ಹಂದಿ, ಕುದುರೆ, ನಾಯಿ ಮತ್ತು ಬೆಕ್ಕು ಇನ್ನಿತರ ಪ್ರಾಣಿಗಳಿಂದ ದೂರವಿರಬೇಕು. ಸಾಮಾನ್ಯ ಜ್ವರ ಬಂದ ತಕ್ಷಣ ನಿರ್ಲಕ್ಷ್ಯ ಮಾಡದೇ ಮನೆ ಮದ್ದು ಸೇವಿಸದೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ. ಸೋಂಕು ದೃಢಪಟ್ಟರೆ, ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಬಳಸಿ ಎಂದು ಸಚಿವ ಖಾದರ್ ನುಡಿದರು.
ದ.ಕ. ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಮಾತನಾಡಿ, ನಿಫಾ ಜ್ವರ ಪತ್ತೆಯಾದರೆ ಇಲಾಖೆಗೆ ಈಗಾಗಲೇ ಬಂದಿರುವ ನಿರ್ದೇಶನದಂತೆ ರೆಸ್ಪಾನ್ಸ್ ಪ್ರೊಟೊಕಾಲ್ ಅನುಸರಿಸಿ ಎಂದರು.
ಸಭೆಯಲ್ಲಿ ದ.ಕ.ಜಿಪಂ ಸಿಇಒ ಡಾ. ಆರ್. ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಡಿಎಚ್‌ಒ ರಾಮಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು.







