ಪಡುಬಿದ್ರಿಯಲ್ಲಿ ಕೆಪಿಎಸ್ ಶಾಲೆ ಉದ್ಘಾಟನೆ

ಪಡುಬಿದ್ರಿ: ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಹಾಗೂ ಆಂಗ್ಲ ಭಾಷಾ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲೂ ಆರಂಭಿಸುವ ಉದ್ದೇಶದೊಂದಿಗೆ ರಾಜ್ಯದಲ್ಲಿ 276 ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ತೆರೆಯಲಾಗಿದೆ ಎಂದು ಶಾಸಕ ಲಾಲಾಜಿ ಆರ್ ಹೇಳಿದರು.
ಅವರು ಪಡುಬಿದ್ರಿ ನಡ್ಸಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಎಲ್‍ಕೆಜಿ, ಯುಕೆಜಿ, ಒಂದನೇ ತರಗತಿ ಆಂಗ್ಲ ಮಾಧ್ಯಮ ತರಗತಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಕೆಪಿಎಸ್ ಶಾಲೆಯ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರದಿಂದ 1 ಕೋಟಿ ರೂ. ಗಳ ಅನುದಾನ ಪಡೆಯಲು ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಈ ಶಾಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲೂ ಪ್ರಯತ್ನಿಸಲಾಗುವುದು ಎಂದರು.
ತರಬೇತಿ ಹೊಂದಿದ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಮೂಲಕ ಎಲ್‍ಕೆಜಿ ಶಿಕ್ಷಕರನ್ನು ನೇಮಿಸಿಕೊಳ್ಳವುದರೊಂದಿಗೆ ಉತ್ತಮ ಶಿಕ್ಷಣವನ್ನು ನೀಡಲು ಸರ್ಕಾರಿ ಶಾಲೆಗಳೂ ಬದ್ಧವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಮೀನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸದಸ್ಯ ರವೀಂದ್ರನಾಥ ಜಿ. ಹೆಗ್ಡೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಯೋಜಕಿ ಉಮಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಉಪಸ್ಥಿತರಿದ್ದರು. ಕೆಪಿಎಸ್ ಮೇಲ್ವಿಚಾರಕಿ, ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋದಾ ಸ್ವಾಗತಿಸಿದರು. ಶಿಕ್ಷಕಿ ಫೆÇ್ಲೀರಿನ್ ಸ್ವಾಗತಿಸಿದರು. ಪ್ರಾಧ್ಯಾಪಕ ಪ್ರಸನ್ನ ವಂದಿಸಿದರು.
ಕೆಪಿಎಸ್ ಪ್ರವೇಶಾತಿಗಾಗಿ ವಿದ್ಯಾರ್ಥಿಗಳನ್ನು ಮನವೊಲಿಸಲಾಗಿದ್ದು, ಸದ್ಯ ಪಡುಬಿದ್ರಿಯ ಕೆಪಿಎಸ್‍ನಲ್ಲಿ ಕನ್ನಡ ಮಾಧ್ಯಮದ ಒಂದನೇ ತರಗತಿಗೆ ವಿದ್ಯಾರ್ಥಿಗಳೇ ಇಲ್ಲ. ಇಲ್ಲಿನ ಕೆಪಿಎಸ್‍ನಲ್ಲಿ ಎಲ್‍ಕೆಜಿಗೆ 6, ಯುಕೆಜಿಗೆ 10 ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣದ 1ನೇ ತರಗತಿಗೆ 7 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.







