ಹೊಸ ಉಡುಪಿ ಉಪವಿಭಾಗ ರಚನೆಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ: ಐವನ್ ಡಿಸೋಜ

ಉಡುಪಿ, ಜೂ.10: ಜಿಲ್ಲೆಯ ಕುಂದಾಪುರ ಕಂದಾಯ ಉಪವಿಭಾಗವನ್ನು ಆಡಳಿತಾತ್ಮಕ ಕಾರಣಗಳಿಗೆ ವಿಗಂಡಿಸಿ ಹೊಸದಾಗಿ ಉಡುಪಿ ಕಂದಾಯ ಉಪ ವಿಭಾಗವನ್ನು ರಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ತಾಲೂಕುಗಳು ರಚನೆ ಯಾಗಿವೆ. ಆದರೆ ಇಲ್ಲಿ ಜಿಲ್ಲೆ ರಚನೆಯಾಗುವಾಗ ಇದ್ದ ಒಂದೇ ಕುಂದಾಪುರ ಉಪವಿಭಾಗ ಮಾತ್ರ ಇದೆ. ಇದರಿಂದ ಇಡೀ ರಾಜ್ಯದಲ್ಲಿ ಕುಂದಾಪುರ ಉಪ ವಿಭಾಗದ ಕೋರ್ಟ್‌ನಲ್ಲಿ ಅತ್ಯಂತ ಹೆಚ್ಚು ಕೇಸುಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದರು.
ಉಡುಪಿ ತಾಲೂಕು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಆಗುತ್ತಿದ್ದು, ಇದು ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಆದುದರಿಂದ ಮುಂದೆ ರಚನೆಯಾಗುವ ಉಡುಪಿ ಉಪವಿಭಾಗವನ್ನು ಇದೇ ಕಟ್ಟಡದಲ್ಲಿ ಆರಂಭಿಸಬಹುದಾಗಿದೆ. ಈ ಬೇಡಿಕೆಯನ್ನು ಸರಕಾರದ ಮುಂದೆ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕುಂದಾಪುರ ಉಪವಿಭಾಗದಲ್ಲಿ ವರ್ಷಕ್ಕೆ ಎಲ್ಲ ವಿಭಾಗಗಳಿಂದ ಸರಸಾರಿ 4,55,876 ಅರ್ಜಿಗಳು ಸ್ವೀಕೃತವಾಗುತ್ತವೆ. ಅಲ್ಲದೆ ಕುಂದಾಪುರ ಉಪ ವಿಭಾಗಕ್ಕೆ ತೆರಳಬೇಕಾದರೆ ಕಾರ್ಕಳದಿಂದ 69ಕಿ.ಮೀ., ಉಡುಪಿಯಿಂದ 38 ಕಿ.ಮೀ., ಕಾಪುವಿನಿಂದ 51ಕಿ.ಮೀ., ಹೆಬ್ರಿಯಿಂದ 55ಕಿ.ಮೀ. ಕ್ರಮಿಸಬೇಕಾ ಗಿದೆ. ಈ ಎಲ್ಲ ಕಾರಣಗಳಿಂದ ಜಿಲ್ಲೆಗೆ ಮತ್ತೊಂದು ಉಪವಿಭಾಗ ಅತಿ ಅಗತ್ಯ ವಾಗಿದೆ ಎಂದು ಅರು ಹೇಳಿದರು.
ಹೊಸ ತಾಲೂಕುಗಳಲ್ಲಿ ಮಿನಿ ವಿಧಾನ ಸೌಧಗಳ ನಿರ್ಮಿಸಲು ತಲಾ 10 ಕೋಟಿ ರೂ. ಅನುದಾನ ಒದಗಿಸಲು ಆಡಳಿತ್ಮಾಕ ಅನುಮೋದನೆ ದೊರೆತಿದ್ದು, ಈ ಬಗ್ಗೆ ಡಿಪಿಆರ್ ರಚನೆ ಮಾಡಲು ಸೂಚಿಸಲಾಗಿದೆ. ಮುಂದೆ ಹಣ ಬಿಡುಗಡೆ ಮಾಡಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಜಿಲ್ಲೆಯ 1623 ಕಂದಾಯ ಅದಾಲತ್‌ಗಳಲ್ಲಿ 40329 ಅರ್ಜಿಗಳನ್ನು ಸ್ವೀಕೃತ ಮಾಡಲಾಗಿದ್ದು, ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ 14 ತಿಂಗಳಲ್ಲಿ ನಡೆದ 25 ಪಿಂಚಣಿ ಅದಾಲತ್‌ಗಳಲ್ಲಿ ಸ್ವೀಕರಿಸಿದ ಎಲ್ಲ 895 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಈ ಮೂಲಕ ಶೇ.100 ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಭಾಸ್ಕರ ರಾವ್ ಕಿದಿ ಯೂರು, ಎರ್ಮಾಳ್ ಶಶಿಧರ ಶೆಟ್ಟಿ, ಕಿರಣ್ ಕುಮಾರ್ ಉದ್ಯಾವರ ಮೊದ ಲಾದವರು ಉಪಸ್ಥಿತರಿದ್ದರು.
ಸರ್ವೆಯರ್ ನೇಮಕಕ್ಕೆ ಸರಕಾರಕ್ಕೆ ವರದಿ
ಉಡುಪಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಸರ್ವೆ ವಿಭಾಗಕ್ಕೆ ಒಂದು ತಿಂಗಳಲ್ಲಿ 3218 ಅರ್ಜಿಗಳು ಬಂದಿದ್ದು, ಹಿಂದಿನ ಬಾಕಿ ಸೇರಿದಂತೆ 3385 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಈಗ 10287 ಅರ್ಜಿಗಳು ಬಾಕಿ ಇವೆ ಎಂದು ಐವನ್ ಡಿಸೋಜ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಸರ್ವೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚು ಸರ್ವೆಯರ್‌ಗಳ ಅಗತ್ಯ ಇದೆ. ಆದುದರಿಂದ ಜಿಲ್ಲೆಗೆ ಹೆಚ್ಚು ಸರ್ವೆಯರ್ ನೇಮಕ ಮಾಡುವಂತೆ ಕಂದಾಯ ಸಚಿವರು ಹಾಗೂ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಆ ಮೂಲಕ ಶೀಘ್ರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
147 ಗ್ರಾಮಗಳಿಗೆ ಟ್ಯಾಂಕರ್ ನೀರು
ಜಿಲ್ಲೆಯಲ್ಲಿ ಒಟ್ಟು 97 ಗ್ರಾಪಂಗಳ 147 ಗ್ರಾಮಗಳಲ್ಲಿ ಒಟ್ಟು 169 ಟ್ಯಾಂಕರ್‌ಗಳ ಮೂಲಕ ಈವರೆಗೆ 38748 ಟ್ರಿಪ್ ನೀರು ಸರಬರಾಜು ಮಾಡ ಲಾಗಿದೆ. ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ವಿಪತ್ತು ನಿಧಿಯಿಂದ ಮಾರ್ಚ್ ತಿಂಗಳಲ್ಲಿ 6 ಕೋಟಿ ಅನುದಾನ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಯಾಗಿದೆ ಎಂದು ಐವನ್ ಡಿಸೋಜ ತಿಳಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ 80 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟಾಸ್ಕ್‌ಫೋರ್ಸ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ಬೇಸಿಗೆಯ ತುರ್ತು ಕುಡಿಯುವ ನೀರಿನ ಪೂರೈಕೆಗಾಗಿ ಎರಡು ಕಂತುಗಳಲ್ಲಿ ಒಟ್ಟು 225 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.







