ಗುತ್ತಿಗೆದಾರರಿಂದ ವೇತನ ಪಾವತಿ ಬಾಕಿ : ಬಿಎಸ್ಸೆನ್ನೆಲ್ ನೌಕರರಿಂದ ಮುತ್ತಿಗೆ
ಮಂಗಳೂರು, ಜೂ.10: ತಮಗೆ ಕಳೆದ ಆರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ತಕ್ಷಣ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಬಿಎಸ್ಸೆನ್ನೆಲ್ ನೌಕರರು ಸೋಮವಾರ ನಗರದ ಉರ್ವ ಮಾರ್ಕೆಟ್ ಬಳಿ ಇರುವ ಗುತ್ತಿಗೆದಾರರ ಕಚೇರಿಗೆ ಮುತ್ತಿಗೆ ಹಾಕಿದರು.
ಗುತ್ತಿಗೆದಾರರು ತಮ್ಮನ್ನು ನಿರಂತರ ದುಡಿಸಿಕೊಳ್ಳುತ್ತಿದ್ದರೂ ವೇತನ ಪಾವತಿಸಿಲ್ಲ. ಆರು ತಿಂಗಳಿನಿಂದ ವೇತನವಿಲ್ಲದೆ ಬದುಕು ಸಾಗಿಸುವುದೇ ದುಸ್ತರವಾಗಿದೆ. ಬಾಕಿ ಇರಿಸಿಕೊಂಡ ವೇತನವನ್ನು ತಕ್ಷಣ ಪಾವತಿಸಬೇಕು ಎಂದು ನೌಕರರು ಆಗ್ರಹಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಎಸ್ಸೆನ್ನೆಲ್ ನೌಕರರು ನ್ಯಾಯಕ್ಕಾಗಿ ಆಗ್ರಹಿಸಿದರು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗುತ್ತಿಗೆದಾರರು ಶೀಘ್ರ ವೇತನ ಪಾವತಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.
ಯೂನಿಯನ್ ಅಧ್ಯಕ್ಷ ವಸಂತ ಆಚಾರಿ, ಕಾರ್ಯದರ್ಶಿ ಉದಯ ಕುಮಾರ್ , ಪ್ರಮುಖರಾದ ನಿತ್ಯಾನಂದ, ಸುನಿಲ್, ಹನೀಫ್ ಸೇರಿದಂತೆ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.





