ಇಲಾಖೆಯ ಜಾಗ ಅತಿಕ್ರಮಣ: ತೆರವಿಗೆ ಡಿಎಸ್‍ಎಸ್ ದೂರು
ಪುತ್ತೂರು: ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಪುತ್ತೂರು ತಾಲೂಕಿನ ಸವಣೂರು ಎಂಬಲ್ಲಿ ಅತಿಕ್ರಮಣ ಮಾಡಿರುವ ಹಾಗೂ ಯಾವುದೇ ಇಲಾಖೆಯ ಪರವಾನಿಗೆ ಇಲ್ಲದೆ ನಡೆಸಲಾಗುತ್ತಿರುವ ವ್ಯಾಪಾರ ಅಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪುತ್ತೂರು ಶಾಖೆಯ ಪದಾಧಿಕಾರಿಗಳು ಸೋಮವಾರ ಪುತ್ತೂರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಗಣೇಶ್ ಗುರಿಯಾನ, ತಾಲ್ಲೂಕು ಸಂಘಟನಾ ಸಂಚಾಲಕರಾದ ಮೀನಾಕ್ಷಿ ಬಂಬಿಲ, ವಿಶ್ವನಾಥ ಪುಣ್ಚತ್ತಾರು,ಹರೀಶ್ ಅಂಕಜಾಲು,ಬಾಬು.ಎನ್.ಸವಣೂರು ನಿಯೋಗದಲ್ಲಿ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸವಣೂರಿನಿಂದ ಬೆಳ್ಳಾರೆಗೆ ಹೋಗುವ ರಸ್ತೆ ಬದಿಯಲ್ಲಿ, ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವರು ಯಾವುದೇ ಪರವಾನಿಗೆ ಇಲ್ಲದೆ ಅಂಗಡಿ ವ್ಯವಹಾರ ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಕಳೆದ ಜೂನ್.1ರಂದು ಮಂಜುನಾಥ ಬಂಬಿಲ ಎಂಬವರು ಎಲ್ಲರಂತೆ ಚಿಕ್ಕದೊಂದು ಅಂಗಡಿ ನಿರ್ಮಿಸಿದ್ದು, ಅದನ್ನು ಅಲ್ಲಿನ ಉದ್ಯಮಿಯೊಬ್ಬರು ಯಾವುದೇ ಇಲಾಖೆಗೆ ದೂರು ನೀಡದೆ,ಕಾನೂನು ಬಾಹಿರವಾಗಿ ಮರುದಿನ ಕೆಡವಿದ್ದಾರೆ. ಅಲ್ಲದೆ ಆ ಜಾಗವನ್ನು ಅತಿಕ್ರಮಿಸಿಕೊಂಡು ತಂತಿ ಬೇಲಿ ನಿರ್ಮಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಕುರಿತು ಮಂಜುನಾಥ ಬಂಬಿಲ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಠಾಣಾಧಿಕಾರಿಯವರು ಉದ್ಯಮಿಯನ್ನು ಕರೆಸಿ ವಿಚಾರಣೆ ನಡೆಸಿ ತಂತಿ ಬೇಲಿ ತೆರವುಗೊಳಿಸಬೇಕೆಂದು ಆದೇಶಿಸಿದ್ದರೂ ತಂತಿ ಬೇಲಿಯನ್ನು ಈ ತನಕ ತೆರವುಗೊಳಿಸಲಾಗಿಲ್ಲ ಎಂದು ದಲಿತ ಸಂಘಟನೆಯ ಮುಖಂಡರು ದೂರಿದ್ದಾರೆ.
ತಕ್ಷಣ ಉದ್ಯಮಿ ಮಾಡಿರುವ ಅತಿಕ್ರಮಣ ತೆರವುಗೊಳಿಸಬೇಕು. ಪರವಾನಿಗೆ ಇಲ್ಲದೆ ನಡೆಯುತ್ತಿರುವ ಅಂಗಡಿಗಳ ಕುರಿತು ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ಮಾಡಿ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಮಂಜುನಾಥ ಬಂಬಿಲ ಅವರಿಗೂ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದು, ಸ್ಪಂದನೆ ಸಿಗದಿದ್ದಲ್ಲಿ ಕಾನೂನು ರೀತಿಯಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.







