ದೊಡ್ಡ ಉದ್ಯಮಗಳೊಂದಿಗೆ ಎಂಎಸ್‌ಎಂಇಗಳ ಸಂಯೋಜನೆಗೆ ಸರಕಾರದ ಯೋಜನೆ

ಗಾಂಧಿನಗರ,ಜೂ.10: ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ)ಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಮತ್ತು ಅವು ದೊಡ್ಡ ಉದ್ಯಮಗಳೊಂದಿಗೆ ಸಂಯೋಜನೆಗೊಳ್ಳಲು ನೆರವಾಗುವ ಉದ್ದೇಶದಿಂದ ದೇಶಾದ್ಯಂತ ಉದ್ಯಮ ಅನುಕೂಲ ಕೇಂದ್ರಗಳನ್ನು ಸ್ಥಾಪಿಸಲು ಎಂಎಸ್‌ಎಂಇ ಸಚಿವಾಲಯವು ಯೋಜಿಸುತ್ತಿದೆ.
ಬ್ಲಾಕ್ ಮಟ್ಟಗಳಲ್ಲಿ ಸ್ಥಾಪನೆಗೊಳ್ಳುವ ಈ ಕೇಂದ್ರಗಳು ಕಿರು ಮತ್ತು ಸಣ್ಣ ಉದ್ಯಮಗಳಿಗೆ ಮಾಹಿತಿಗಳನ್ನು ಒದಗಿಸಲು ಮತ್ತು ಅವು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲು ನೆರವಾಗಲಿವೆ ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಮಮೋಹನ ಮಿಶ್ರಾ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ ಇಲ್ಲಿ ಆಯೋಜಿಸಿದ್ದ ಸಾಮಾಜಿಕ ಉದ್ಯಮಶೀಲತೆ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಮಿಶ್ರಾ, ಮಾರುಕಟ್ಟೆಗಳು ತಮ್ಮದೇ ವೇಗದಲ್ಲಿ ಸಾಗುವುದರಿಂದ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಸರಕಾರವು ಹೆಚ್ಚಿನ ಗಮನ ಹರಿಸಿದೆ. ಎಂಎಸ್‌ಎಂಇಗಳ ಉತ್ಪನ್ನಗಳನ್ನು ಮಾರುಕಟ್ಟೆಯು ಸ್ವೀಕರಿಸುವಂತಾಗಲು ವೆಚ್ಚವನ್ನು ತಗ್ಗಿಸಲು ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಅನುಕೂಲಗಳನ್ನು ನಾವು ಕಲ್ಪಿಸಲಿದ್ದೇವೆ ಎಂದರು.







