ಆದಿತ್ಯನಾಥ್ ವಿರುದ್ಧ ಆಕ್ಷೇಪಕಾರಿ ವಿಡಿಯೋ: ಪತ್ರಕರ್ತನ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪತ್ನಿ

ಹೊಸದಿಲ್ಲಿ,ಜೂ.11: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವರ್ಚಸ್ಸಿಗೆ ಹಾನಿಯುಂಟು ಮಾಡಿದ್ದಾರೆಂಬ ಆರೋಪದಲ್ಲಿ ಬಂಧಿತರಾದ ದಿಲ್ಲಿ ಮೂಲದ ಪತ್ರಕರ್ತ ಪ್ರಶಾಂತ್ ಕನೊಜಿಯಾ ಅವರ ಪತ್ನಿ, ತನ್ನ ಪತಿಯ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ.
ಆದಿತ್ಯನಾಥ್ ವಿರುದ್ಧ ಆಕ್ಷೇಪಕಾರಿ ವಿಡಿಯೋವನ್ನ್ನು ಪ್ರಸಾರ ಮಾಡಿದ ಆರೋಪದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ. ತನ್ನ ಪತಿಯನ್ನು ಬಂಧಿಸುವಾಗ ಪೊಲೀಸರು ಸಮರ್ಪಕವಾದ ಕಾನೂನು ವಿಧಿವಿಧಾನಗಳನ್ನು ಅನುಸರಿಸಿಲ್ಲವಾದುದರಿಂದ ಅವರ ಬಂಧನ ಅಕ್ರಮವೆಂದು ಕನೋಜಿಯಾ ಅವರ ಪತ್ನಿ ಜಗಿಸಾ ಆರೋರಾ ತಿಳಿಸಿದ್ದಾರೆ.
ಕನೋಜಿಯಾ ವಿರುದ್ಧ ದಾಖಲಿಸಲಾದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಅಕ್ರಮವಾಗಿದ್ದು, ಅವರ ಬಂಧನಕ್ಕಾಗಿ ಯಾವುದೇ ವಾರಂಟ್ ಜಾರಿಗೊಳಿಸಿಲ್ಲವೆಂದು ಕನೋಜಿಯಾ ಅವರ ನ್ಯಾಯವಾದಿ ಶಾದನ್ ಫರ್ಸಾತ್ ತಿಳಿಸಿದ್ದಾರೆ.
‘‘ಕನೋಜಿಯಾ ವಿರುದ್ಧದ ಎಫ್‌ಐಆರ್ ಆಕ್ರಮವಾದುದು. ಯಾಕೆಂದರೆ ಮಾನನಷ್ಟ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವ ಅಗತ್ಯವಿಲ್ಲ ಮತ್ತು ಇಂತಹ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟರು ಮಾತ್ರ ಕಾರ್ಯಾಚರಿಸಬೇಕೇ ಹೊರತು ಪೊಲೀಸರಲ್ಲ ಎಂದು ಅವರು ವಿವರಿಸಿದ್ದಾರೆ. ಕನೋರಿಯಾ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಎಫ್‌ಐಆರ್ ಜಾಮೀನು ಯೋಗ್ಯವಾದವು’’ ಎಂಬುದಾಗಿ ಅವರು ವಿವರಿಸಿದ್ದಾರೆ.
ತನ್ನ ಪತಿಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಉತ್ತರಪ್ರದೇಶ ಸರಕಾರಕ್ಕೆ ಸೂಚನೆ ನೀಡುವಂತೆ ಹಾಗೂ ಅವರ ಬಂಧನ ಕಾರ್ಯಾಚರಣೆಯಲ್ಲಿ ಶಾಮೀಲಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ನ್ಯಾಯಾಲಯಕ್ಕೆ ಅರ್ಜಿದಾರೆ ಜಗೀಶಾ ಆರೋರಾ ನ್ಯಾಯಾಲಯವನ್ನು ಕೋರಿದ್ದಾರೆ . ಆರೋರಾ ಅವರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ನಡೆಸಲಿದೆ.
ಆದಿತ್ಯನಾಥ್ ಅವರಿಗೆ ತಾನು ವಿವಾಹದ ಪ್ರಸ್ತಾವವೊಂದನ್ನು ಕಳುಹಿಸಿರುವುದಾಗಿ ಹೇಳಿಕೊಂಡು ಮಹಿಳೆಯೊಬ್ಬರು ಆದಿತ್ಯನಾಥ್ ಕಾರ್ಯಾಲಯದ ಮುಂದೆ ಸುದ್ದಿಗಾರರಿಗೆ ತಿಳಿಸುತ್ತಿರುವ ದೃಶ್ಯದ ವಿಡಿಯೋವನ್ನು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡಿದ್ದ ಫ್ರೀಲಾನ್ಸ್ ವರದಿಗಾರ ಕನೋಜಿಯಾ ವಿರುದ್ಧ ಆರೋಪ ಹೊರಿಸಲಾಗಿತ್ತು.
ಈ ವಿಡಿಯೋವನ್ನು ಪ್ರಸಾರ ಮಾಡಿದ ನೊಯ್ಡಾ ಸುದ್ದಿವಾಹಿನಿಯೊಂದರ ಸಂಪಾದಕ ಹಾಗೂ ಮಾಲಕನನ್ನು ಕೂಡಾ ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಸಂಜೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಇನ್ನಿಬ್ಬರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆದಿತ್ಯನಾಥ್ ವಿರುದ್ಧ ಆಕ್ಷೇಪಕಾರಿ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.







