ಎಸ್ಪಿಯಾಗಿ ಪ್ರಕಾಶ್ ಗೌಡ ಮತ್ತೆ ಹಾಸನಕ್ಕೆ

ಹಾಸನ, ಜೂ.10: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ ಅವರು ಇಂದು ಮತ್ತೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು.
ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎ.ಎನ್. ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿತ್ತು. ಇವರ ಜಾಗಕ್ಕೆ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಚುನಾವಣೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸರ್ಕಾರ ಪುನಃ ಹಾಸನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪ್ರಕಾಶ್ ಗೌಡ ಅವರನ್ನು ನೇಮಿಸಿ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಸೋಮವಾರ ಅವರು ಚೇತನ್ ಸಿಂಗ್ ರಾಥೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಪ್ರಕಾಶ್ ಗೌಡ ಅವರು ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಚುನಾವಣಾ ಆಯೋಗ ಅವರನ್ನು ವರ್ಗಾವಣೆ ಮಾಡಿತ್ತು. ನಂತರ ಬಂದ ಚೇತನ್ ಸಿಂಗ್ ರಾಥೋಡ್ ಅವರು ಕೂಡ ಚುನಾವಣೆಯನ್ನು ಯಾವುದೇ ಲೋಪವಾಗದಂತೆ ಯಶಸ್ವಿಯಾಗಿ ನೆರವೇರಿಸಿದ್ದರು. ಚೇತನ್ ಸಿಂಗ್ ರಾಥೋಡ್ ಅವರು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.





