ವಿದ್ಯುತ್ ದರ ಏರಿಕೆ ಖಂಡಿಸಿ ಸಿಪಿಎಂ ಧರಣಿ

ಕುಂದಾಪುರ, ಜೂ.11: ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸಿಪಿಐಎಂ ಕುಂದಾಪುರ ವಲಯದ ವತಿಯಿಂದ ಕುಂದಾಪುರ ಮೆಸ್ಕಾಂ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಾಯಿತು.
ಸಿಪಿಎಂ ಪಕ್ಷದ ಕುಂದಾಪುರ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿಂದ ಸರಿಯಾದ ಕೆಲಸವಿಲ್ಲದೆ ಜನಸಾಮಾನ್ಯರ ಆದಾಯ ಕುಂಠಿತವಾಗಿದೆ. ರಾಜ್ಯದಲ್ಲಿ ಬರಪರಿಸ್ಥಿತಿ ಇರುವ ಸನ್ನಿವೇಶದಲ್ಲಿ ಸರಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಜನರಿಗೆ ಬಗೆದ ದ್ರೋಹ ವಾಗಿದೆ ಎಂದು ಟೀಕಿಸಿದರು.
ದರ ಏರಿಕೆ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವ ಸರಕಾರ ಜನ ವಿರೋಧಿಯಾಗಿ ವರ್ತಿಸುತ್ತಿದೆ. ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರ ಅಗತ್ಯ ವಸ್ತುಗಳ ಮೇಲೆಯೂ ಪರಿಣಾಮ ಬೀರಿ ಎಲ್ಲ ವಸ್ತುಗಳ ಬೆಲೆ ಏರಿಕೆ ಯಾಗಲಿದೆ. ಮೀಟರ್ ದೋಷ ಅಥವಾ ರೀಡಿಂಗ್ ದೋಷಗಳ ಪರಿಣಾಮ ಜನರಿಂದ ಹೆಚ್ಚು ಬಿಲ್ ವಸೂಲಿ ಮಾಡುತ್ತಿರುವುದು ರಿಯಲ್ಲ ಎಂದು ಅವರು ದೂರಿದರು.
ಈ ಕುರಿತು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ದಾಸ ಭಂಡಾರಿ, ಸುರೇಶ್ ಕಲ್ಲಾಗರ, ಡಿ.ಲಕ್ಷ್ಮಣ, ಬಲ್ಕೀಸ್ ಉಪಸ್ಥಿರಿದ್ದರು.
ಬೈಂದೂರು: ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಬೇಕೆಂದು ಐದು ಎಸ್ಕಾಂಗಳು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿರುವ ಕ್ರಮವನ್ನು ಖಂಡಿಸಿ ಸಿಪಿಎಂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೈಂದೂರು ಮೆಸ್ಕಾಂ ಕಛೇರಿ ಎದುರು ಧರಣಿ ನಡೆಸಲಾಯಿತು.
ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಮರಳು ಸಮಸ್ಯೆಯ ಮಧ್ಯೆ ವಿದ್ಯುತ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಬೆಲೆ ಇಳಿಕೆಗೆ ಕ್ರಮಕೈೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಿಪಿಎಂ ಮುಖಂಡರಾದ ವೆಂಕಟೇಶ್ ಕೋಣಿ, ನಾಗರತ್ನ ನಾಡ, ಮಂಜು ಪೂಜಾರಿ, ರಾಮ ಕಂಬದಕೋಣಿ, ವಿಜಯ ಕೋಯನಗರ, ಈಶ್ವರ, ಗಾಯಿತ್ರಿ ಪಡುವರಿ, ಸಂತೋಷ ನಾಯ್ಕನಕಟ್ಟೆ, ಗಣೇಶ್ ತೊಂಡೆ ಮಕ್ಕಿ, ಗಣೇಶ ಮೊಗವೀರ ಉಪಸ್ಥಿತರಿದ್ದರು.
ಬೈಂದೂರು ಸ್ಟೇಟ್ ಬ್ಯಾಂಕ್ ಎದುರುಗಡೆಯಿಂದ ಮೆಸ್ಕಾಂ ಕಚೇರಿರೆಗೆ ಮೆರವಣಿಗೆ ನಡೆಸಲಾಯಿತು.








