ವಿದ್ಯಾರ್ಥಿ ಪಾಸುಗಳ ಮಾನ್ಯತಾ ಅವಧಿ ಜೂ.30ರವರೆಗೆ ವಿಸ್ತರಣೆ
ಉಡುಪಿ, ಜೂ.11: 2019-20ನೇ ಶೈಕ್ಷಣಿಕ ವರ್ಷದ ತರಗತಿಗಳು ಈಗಾಗಲೇ ಪ್ರಾರಂಭವಾಗಿರುವುದರಿಂದ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು 2018-19ನೇ ಸಾಲಿನಲ್ಲಿ ವಿತರಣೆ ಯಾಗಿರುವ ವಿದ್ಯಾರ್ಥಿ ಪಾಸುಗಳನ್ನು ತೋರಿಸಿ, ಜೂ.30ರವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು 2018-19ನೇ ಸಾಲಿನ ವಿದ್ಯಾರ್ಥಿ ಪಾಸಿನ ಜೊತೆಗೆ ಪ್ರಸಕ್ತ ಸಾಲಿನ ಬೋಧನಾ ಶುಲ್ಕ ರಸೀದಿ ಅಥವಾ ಶಾಲಾ/ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಾಣಿಸಲು ಅವಕಾಶ ನೀಡಲಾಗುವುದು.
ವಿದ್ಯಾರ್ಥಿಗಳು ನೂತನ ಶಾಲೆ/ಕಾಲೇಜುಗಳಿಗೆ ಸೇರ್ಪಡೆಯಾಗಿದ್ದು, ಹಿಂದಿನ ವರ್ಷದ ಬಸ್ ಪಾಸ್ ಇಲ್ಲದ ಸಂದರ್ಭದಲ್ಲಿ ನೂತನ ಶಾಲೆ/ಕಾಲೇಜಿಗೆ ಸೇರ್ಪಡೆಯಾಗಿರುವ ಬೋಧನಾ ಶುಲ್ಕ ರಸೀದಿ ಅಥವಾ ಶಾಲಾ/ಕಾಲೇಜಿನಿಂದ ವಿತರಣೆ ಮಾಡಿರುವ ಗುರುತಿನ ಚೀಟಿಯನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





