ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ವ್ಯಕ್ತಿ ಬಂಧನ

ವಿಜಯಪುರ, ಜೂ.11: ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದು, ಈತ, ತನ್ನ ಬಯಕೆಯನ್ನು ದೇವರು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಕೃತ್ಯವೆಸಗಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗೊಳಸಂಗಿ ಗ್ರಾಮದ ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ(32) ಬಂಧಿತ ಆರೋಪಿ ಎಂದು ನಿಡಗುಂದಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಜೂ.8ರಂದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆಕ್ರೋಶ?: ಬಂಧಿತ ಚಂದ್ರಾಮಪ್ಪ ದೊಡ್ಡಮನಿ, ನಂದಿ ದೇವರ ಮೇಲೆ ತುಂಬ ನಂಬಿಕೆ ಇಟ್ಟಿದ್ದ. ತನ್ನ 3 ಲಕ್ಷ ರೂ. ಸಾಲ ಮನ್ನಾ ಆಗಬಹುದು ಹಾಗೂ ಪತ್ನಿಯ ಜೊತೆಗೆ ಹದಗೆಟ್ಟಿದ್ದ ಸಂಬಂಧ ಸರಿಯಾಗಬಹುದು ಎಂದು ದೇವರಿಗೆ ಮೊರೆ ಹೋಗಿದ್ದ ಎನ್ನಲಾಗಿದೆ.
ಹಲವು ದಿನಗಳಾದರೂ, ತನ್ನ ಬಯಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಗ್ರಾಮದ ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿ, ಪರಾರಿಯಾಗಿದ್ದ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.







