ಪ್ಲಾಸ್ಟಿಕ್ ನಿಷೇಧ ಉಡುಪಿಯಲ್ಲಿ ಯಾಕೆ ಅಸಾಧ್ಯ: ರಾಯನ್ ಫೆರ್ನಾಂಡಿಸ್

ಉಡುಪಿ, ಜೂ.12: ಉಡುಪಿ ನಗರಸಭೆಯು 2012ರಲ್ಲಿಯೇ ಪ್ಲಾಸ್ಟಿಕ್‌ನ್ನು ನಿಷೇಧ ಮಾಡಿದೆಯಾದರೂ, ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿಲ್ಲ. ಇದರಿಂದಾಗಿ ಪ್ರತೀ ರಸ್ತೆ ಬದಿಯಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳು ರಾಶಿ ಬೀಳುವಂತಾಗಿದೆ. ಮುಂಬೈ ಯಂತಹ ಬೃಹತ್ ನಗರದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಿರುವಾಗ ಉಡುಪಿ ನಗರಸಭೆಯಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪರಿಸರ ಹೋರಾಟಗಾರ ರಾಯನ್ ಫೆರ್ನಾಂಡಿಸ್ ಪ್ರಶ್ನಿಸಿದ್ದಾರೆ.
ಉಡುಪಿ ಬೀಡಿನಗುಡ್ಡೆಯ ಶ್ರೀಮುಖ್ಯಪ್ರಾಣದಲ್ಲಿ ಜೂ.9ರಂದು ನಡೆದ ಜನಪರ ಚಿಂತನ ವೇದಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮತ್ತು ಪರಿಸರ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ಅತ್ಯಂತ ವಿಷಕಾರಿ ರಾಸಾಯನಿಕದಿಂದ ತಯಾರಿಸಲಾಗುವ ಪ್ಲಾಸ್ಟಿಕ್ ಅತೀ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಅಷ್ಟೇ ವೇಗವಾಗಿ ಭೂಮಿ, ನೀರು ಮತ್ತು ಗಾಳಿಯನ್ನು ಸೇರುತ್ತದೆ. ಆ ಮೂಲಕ ಅವುಗಳನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಮಾಲಿನ್ಯ ಮಾಡುತ್ತಿದೆ. ಸುಟ್ಟರೂ ಸುಡದ, ಭೂಮಿಯೊಳಗೆ ಹೂತು ಹಾಕಿದರೂ ಕರಗದ ಪ್ಲಾಸ್ಟಿಕ್ ಕ್ಯಾನ್ಸರ್‌ಗೂ ಕಾರಣವಾಗುತ್ತಿದೆ ಎಂದರು.
2050ರ ಹೊತ್ತಿಗೆ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿ, ಮೀನಿಗಿಂತ ಪ್ಲಾಸ್ಟಿಕ್ ಸಂಖ್ಯೆ ಹೆಚ್ಚಾಗಲಿದೆ. ಪ್ಲಾಸ್ಟಿಕ್‌ನಿಂದಾಗಿ ಪ್ರತಿವರ್ಷವೂ ಲಕ್ಷಾಂತರ ಪ್ರಾಣಿ-ಪಕ್ಷಿಗಳು, ಸಮುದ್ರಜೀವಿಗಳು ಸಾಯುತ್ತಿವೆ. ಇನ್ನಾದರೂ ಸರಕಾರ ಮತ್ತು ಜನರು ಎಚ್ಚರಗೊಳ್ಳಗೊಳ್ಳಬೇಕು ಎಂದು ಅವರು ತಿಳಿಸಿದರು.
ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಗುಜರಿ ಅಂಗಡಿಯವರು ಪ್ಲಾಸ್ಟಿಕ್ ತೆಗೆದುಕೊಳ್ಳದೆ ಇರುವ ಬಗ್ಗೆ, ಕರ್ನಾಟಕದಲ್ಲಿ ಪ್ಲಾಸ್ಟಿಕ್ ಮರುಬಳಕೆಗೆ ಸಂಬಂಧಿಸಿದ ಕಾರ್ಖಾನೆ ಇಲ್ಲದಿರುವ ಬಗ್ಗೆ, ನಗರಸಭೆಯ ತ್ಯಾಜ್ಯ ಸಂಗ್ರಹಿಸು ವವರು ಪ್ಲಾಸ್ಟಿಕ್‌ನಲ್ಲಿಯೇ ತ್ಯಾಜ್ಯ ಕಟ್ಟಿಕೊಡುವಂತೆ ಕಡ್ಡಾಯ ಮಾಡುತ್ತಿರುವ ಬಗ್ಗೆ, ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಕಾರ್ಯೋನ್ಮುಖವಾಗದಿರುವುದು ಸಹಿತ ಹಲವು ವಿಷಯಗಳ ಕುರಿತು ಚರ್ಚೆ ಗಳು ನಡೆದವು.
ಅಧ್ಯಕ್ಷತೆಯನ್ನು ಭಾರತಿ ಎಸ್.ಕೊಡಂಕೂರು ವಹಿಸಿದ್ದರು. ಸಂವಾದದಲ್ಲಿ ಗಣೇಶ ರಾವ್ ಕೊರಂಗ್ರಪಾಡಿ, ಯೋಗೀಶ್ ಪೂಜಾರಿ ಕಾಡಬೆಟ್ಟು, ಜ್ಯೋತಿ ಅಂಬಲಪಾಡಿ, ಅಕ್ಷತಾ ವಿಶ್ವನಾಥ್ ಚಿಟ್ಪಾಡಿ ಮೊದಲಾದವರು ಭಾಗವಹಿಸಿದ್ದರು.
ಜನಪರ ಚಿಂತನ ವೇದಿಕೆಯ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಡಿನಗುಡ್ಡೆ ಸ್ವಾಗತಿಸಿದರು. ಸದಸ್ಯರಾದ ವಿಶ್ವನಾಥ ಪೂಜಾರಿ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಸುಮಾ ಜಿ.ಶೆಟ್ಟಿ ವಂದಿಸಿದರು. ಗೌರವಾಧ್ಯಕ್ಷ ಶ್ರೀರಾಮ ದಿವಾಣ ಕಾರ್ಯಕ್ರಮ ನಿರೂಪಿಸಿದರು.







