ಮಗುವಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲೇ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದ ಮಹಿಳೆ

ಅಡ್ಡಿಸ್ ಅಬಾಬ, ಜೂ.13: ಪಶ್ಚಿಮ ಇಥಿಯೋಪಿಯದ ಮೇಟು ಎಂಬಲ್ಲಿನ 31 ವರ್ಷದ ಅಲ್ಮಾಝ್ ಡೆರೇಸ್ ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ 30 ನಿಮಿಷಗಳಲ್ಲಿಯೇ ಆಸ್ಪತ್ರೆಯಲ್ಲಿಯೇ ತನ್ನ ಸೆಕೆಂಡರಿ ಸ್ಕೂಲ್ ಪರೀಕ್ಷೆ ಬರೆದಿದ್ದಾರೆ.
ಹೆರಿಗೆಗಿಂತ ಮುಂಚೆಯೇ ಪರೀಕ್ಷೆಗೆ ಹಾಜರಾಗಬಹುದೆಂಬ ಆಶಾಭಾವನೆಯಲ್ಲಿ ಅಲ್ಮಾಝ್ ಇದ್ದರಾದರೂ ಈದುಲ್ ಫಿತ್ರ್ ಕಾರಣ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದವು.
ಸೋಮವಾರ ಆಕೆಯ ಪರೀಕ್ಷೆ ಆರಂಭಗೊಳ್ಳುವ ಕೆಲವೇ ಕ್ಷಣಗಳ ಮೊದಲು ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಆಕೆ ತನಗೆ ಪರೀಕ್ಷೆಗೆ ಹಾಜರಾಗಬೇಕೆಂದು ಹೇಳಿದ್ದಳು. ಪದವಿ ಪಡೆಯಲು ಮುಂದಿನ ವರ್ಷದ ತನಕ ಕಾಯುವುದು ಆಕೆಗೆ ಬೇಕಿರಲಿಲ್ಲ.
ಸೋಮವಾರ ಆಸ್ಪತ್ರೆಯ ಬೆಡ್ ನಲ್ಲಿ ಕುಳಿತುಕೊಂಡೇ ಆಕೆ ಇಂಗ್ಲಿಷ್, ಹಾಗೂ ಗಣಿತ ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದ ಪರೀಕ್ಷೆಗಳನ್ನು ಮುಂದಿನ ದಿನಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿಯೇ ಬರೆಯಲಿದ್ದಾರೆ.
ಆಕೆ ಆಸ್ಪತ್ರೆಯಲ್ಲಿಯೇ ಪರೀಕ್ಷೆಗೆ ಹಾಜರಾಗುವುದಾಗಿ ಹೇಳಿದ್ದರಿಂದ ಶಾಲಾಧಿಕಾರಿಗಳನ್ನು ಮನವೊಲಿಸಬೇಕಾಯಿತು ಎಂದು ಆಕೆಯ ಪತಿ ತಡೀಸ್ ಹೇಳಿದ್ದಾರೆ.
ಆಕೆಯ ಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್ ಬೆಂಗಾವಲಿನಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಆಕೆ ಪರೀಕ್ಷೆ ಬರೆಯುತ್ತಿರುವಾಗಲೂ ಕಾವಲು ಕಾಯಲಾಗಿತ್ತು. ಎಲ್ಲಾ ಪರೀಕ್ಷೆಗಳು ಮುಗಿದ ನಂತರ ಆಕೆ ಎರಡು ವರ್ಷದ ಕೋರ್ಸ್ ಗೆ ಸೇರಿ ಮುಂದೆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುವ ಉದ್ದೇಶ ಹೊಂದಿದ್ದಾರೆ.
ಇಥಿಯೋಪಿಯಾದಲ್ಲಿ ಯುವತಿಯರು ಸೆಕೆಂಡರಿ ಶಾಲೆಯನ್ನು ಅರ್ಧದಲ್ಲಿಯೇ ತೊರೆದು ವಿವಾಹವಾದ ನಂತರ ಶಿಕ್ಷಣ ಮುಂದುವರಿಸುವುದು ಸಾಮಾನ್ಯವಾಗಿದೆ.







