ನಾಳೆ ಸಚಿವ ಸಂಪುಟ ವಿಸ್ತರಣೆ: ಪಕ್ಷೇತರರಿಬ್ಬರಿಗೆ ಸಚಿವ ಸ್ಥಾನ ನಿಶ್ಚಿತ

ಬೆಂಗಳೂರು, ಜೂ. 13: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ (ಜೂ.14) ಮಧ್ಯಾಹ್ನ 1 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ರಾಜ್ಯಪಾಲ ವಜೂಭಾಯಿ ವಾಲಾ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಪಕ್ಷೇತರ ಶಾಸಕರಾದ ಮುಳುಬಾಗಿಲು ಕ್ಷೇತ್ರದ ಎನ್.ನಾಗೇಶ್ ಹಾಗೂ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ನಿಶ್ಚಿತವಾಗಿದೆ. ಸಂಪುಟದಲ್ಲಿ ಮೂರ ಸ್ಥಾನಗಳು ಖಾಲಿ ಇದ್ದು, ಮತ್ತೊಂದು ಸ್ಥಾನ ಯಾರಿಗೆ ಎಂಬುವುದು ಭಾರೀ ಕುತೂಹಲ ಸೃಷ್ಟಿಸಿದೆ.
ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ಸಚಿವ ಸ್ಥಾನ ನೀಡಲು ಜೆಡಿಎಸ್ ವರಿಷ್ಠ ದೇವೇಗೌಡ ಒಲವು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಅಲ್ಲದೆ, ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿರುವ ಎಚ್. ವಿಶ್ವನಾಥ್ ಅವರಿಗೆ ಸಚಿವ ನೀಡಬೇಕೆಂಬ ಒತ್ತಡವೂ ಕೇಳಿಬಂದಿದೆ.
ಸಂಪುಟದಲ್ಲಿ ಜೆಡಿಎಸ್‌ನ 2 ಹಾಗೂ ಕಾಂಗ್ರೆಸ್ ಪಕ್ಷದ 1ಸ್ಥಾನ ಸೇರಿದಂತೆ 3 ಸಚಿವ ಸ್ಥಾನಗಳು ಖಾಲಿ ಇದ್ದು, ಪಕ್ಷೇತರರಿಬ್ಬರಿಗೆ ಎರಡು ಸ್ಥಾನ ಭರ್ತಿಯಾದರೆ ಮತ್ತೊಂದು ಸ್ಥಾನ ಯಾರಿಗೆ ನೀಡಲಿದ್ದಾರೆಂಬುದು ಸದ್ಯದ ಕುತೂಹಲವಾಗಿದೆ. ಈ ನಡುವೆ ಹಿರಿಯರಾದ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ನಾಳೆ(ಜೂ.14) ಮಧ್ಯಾಹ್ನ 1ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಸಮಾರಂಭದಲ್ಲೆ ಎಲ್ಲ ಪ್ರಶ್ನೆಗಳು, ರಾಜ್ಯದ ಜನತೆ ಮತ್ತು ಶಾಸಕರು ಸೇರಿದಂತೆ ರಾಜಕೀಯ ಮುಖಂಡರ ಕುತೂಹಲಕ್ಕೆ ತೆರೆಬೀಳಲಿದ್ದು, ಎಲ್ಲರ ಚಿತ್ತ ಸಂಪುಟ ವಿಸ್ತರಣೆಯತ್ತ ನೆಟ್ಟಿದೆ.







