ಉಡುಪಿ ನಗರದಲ್ಲಿ ಮಳೆ ಅವಾಂತರ: ಕೃತಕ ನೆರೆಯ ಭೀತಿ

ಉಡುಪಿ, ಜೂ.13: ಉಡುಪಿ ನಗರಸಭೆ ಆಡಳಿತವು ಈ ಬಾರಿ ಮಳೆ ಗಾಲಕ್ಕೆ ಮೊದಲು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದ ಪರಿಣಾಮ ನಗರದಲ್ಲಿ ಹಲವು ಆವಾಂತರಗಳು ಸಂಭವಿಸಿವೆ. ಮಳೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದ ಸುರಿದ ಮಳೆಯಿಂದ ಈ ಸಮಸ್ಯೆಗಳು ಸೃಷ್ಠಿಯಾಗಿವೆ.
ನಗರಸಭೆಯು 75 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ಕಲ್ಸಂಕ ಸೇತುವೆಯ ಅಗಲೀಕರಣ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದ್ದು, ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಹಲವು ಸಮಸ್ಯೆಗಳು ಉದ್ಭವಿಸಿವೆ. ಇದೀಗ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಳೆಯ ಮಧ್ಯೆ ತರಾತುರಿಯಲ್ಲಿ ಕಾಮಗಾರಿಯನ್ನು ಮುಂದುವರೆಸಲಾಗಿದೆ.
ಈ ಕಾಮಗಾರಿ ನಡೆಯುವ ಸಮೀಪ ಶ್ರೀಕೃಷ್ಣ ಮಠಕ್ಕೆ ತೆರಳುವ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದೆ. ಇಲ್ಲಿ ನೀರು ಸುಗಮವಾಗಿ ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದೆ ಈ ಸಮಸ್ಯೆ ಉಂಟಾಗಿದೆ. ಇದರಿಂದ ಭಕ್ತಾಧಿಗಳು, ಸಾರ್ವಜನಿಕರು, ವಾಹನ ಸವಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ತೀರಾ ತೊಂದರೆ ಅನುಭವಿಸುವಂತಾಯಿತು.
ಅದೇ ರೀತಿ ಕಲ್ಸಂಕ ತೋಡಿನಲ್ಲಿ ಹೂಳು ತುಂಬಿದ್ದು, ಗಿಡಗುಂಟೆಗಳನ್ನು ಈವರೆಗೆ ತೆರವುಗೊಳಿಸಿಲ್ಲ. ಮುಂದೆ ಸತತವಾಗಿ ಭಾರೀ ಮಳೆ ಸುರಿದರೆ ಈ ಪರಿಸರದಲ್ಲಿ ಕೃತಕ ನೆರೆ ಸೃಷ್ಠಿಯಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಸುರಿದ ಮಳೆಯಿಂದ ಉಡುಪಿ ಶ್ರೀಕೃಷ್ಣ ಮಠದ ರಥಬೀದಿ ಜಲಾವೃತಗೊಂಡಿತ್ತು. ಇದರ ಮಧ್ಯೆಯೇ ರಥೋತ್ಸವ ನಡೆಯಿತ್ತೆಂದು ತಿಳಿದುಬಂದಿದೆ. ಅದೇ ರೀತಿ ಭಾರೀ ಮಳೆಯಿಂದಾಗಿ ರಾಜಾಂಗಣ ಸಮೀಪ ಇಟ್ಟ ಭಕ್ತರ ನೂರಾರು ಚಪ್ಪಲಿಗಳು ಚರಂಡಿ ಸೇರಿವೆ.
ಬನ್ನಂಜೆಯ ಗರಡಿ ಸೇತುವೆಯ ಬಳಿ ನಗರಸಭೆ ಈವರೆಗೆ ಹೂಳೆತ್ತುವ ಕಾಮಗಾರಿ ನಡೆಸದ ಪರಿಣಾಮವಾಗಿ ತ್ಯಾಜ್ಯ ರಾಶಿ ಹಾಗೂ ಮರದ ದಿಂಡು ಗಳು ಸೇರಿಕೊಂಡಿವೆ. ಇದರಿಂದ ನೀರು ಮುಂದಕ್ಕೆ ಹರಿದು ಹೋಗಲು ಸಾಧ್ಯ ವಾಗದೆ ಶಿರಿಬೀಡು ವಾರ್ಡ್‌ನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೆರೆ ಉಂಟಾ ಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪರ್ಕಳದ ಸ್ವಾಗತ್ ಹೋಟೆಲ್ನ ಮಾಲಕರಾದ ಪಿ.ಮೋಹನದಾಸ ನಾಯಕ್ ಎಂಬವರ ಪರ್ಕಳದ ಮಂಜುನಾಥನಗರದಲ್ಲಿರುವ ಮನೆಯ ಗೋಡೆ ರಾತ್ರಿಯ ಮಳೆಗೆ ಕುಸಿದು ಸುಮಾರು ಮೂರು ಲಕ್ಷ ರೂ. ನಷ್ಟ ಉಂಟಾಗಿದೆ. ಮೋಹನದಾಸ ಜರ್ಮನಿ ಪ್ರವಾಸದಲ್ಲಿದ್ದು, ಮನೆಯ ಒಳಗೆ ಕೆಸರು ನೀರು ತುಂಬಿದೆ ಹಾಗೂ ಹೂವಿನ ಚಟ್ಟಿಗಳಿಗೆ ಹಾನಿಯಾಗಿದೆ.
‘ನಗರಸಭೆಯು ಅವೈಜ್ಞಾನಿಕವಾಗಿ ತೋಡು ನಿರ್ಮಿಸಿದ ಪರಿಣಾಮವಾಗಿ ಸಮೀಪದ ವಸತಿ ಸಮುಚ್ಛಯದ ನೀರು ಹಾಗೂ ಪೇಟೆಯ ಮೇಲ್ಭಾಗದ ನೀರು ಖಾಸಗಿ ಜಾಗದ ಎದುರಿನ ತೋಡಿನಲ್ಲಿ ಹರಿಯುವಂತೆ ಮಾಡಿರುವುದೇ ಈ ಅನಾಹುತಕ್ಕೆ ಕಾರಣ’ ಎಂದು ಮನೆಯವರು ದೂರಿದ್ದಾರೆ.
ರಾ.ಹೆದ್ದಾರಿ ಕಾಮಗಾರಿ: ಮಣ್ಣು ಕುಸಿತ
ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲ್ಪೆ -ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಕಡಿಯಾಳಿ -ಪರ್ಕಳ ಮಧ್ಯೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಪ್ರದೇಶದಲ್ಲಿ ಹಲವು ಕಡೆ ಮಣ್ಣು ಕುಸಿತ ಉಂಟಾಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.
ಮಣಿಪಾಲ ಕುಂಡೇಲು ಕಾಡಿನ ಪ್ರದೇಶದಲ್ಲಿರುವ ಆಳವಾದ ಕಂದಕಕ್ಕೆ ಮಣ್ಣು ತುಂಬಿಸಿ ಸಮತಟ್ಟು ಮಾಡಲಾಗಿದ್ದು, ಇದೀಗ ಭಾರಿ ಮಳೆಯಿಂದಾಗಿ ಇಲ್ಲಿನ ಮಣ್ಣು ಕುಸಿತ ಕಂಡು ಹೊಂಡಕ್ಕೆ ಜರಿದಿದೆ. ಅದೇ ರೀತಿ ಎಂಐಟಿ ಸಮೀಪ ಹೆದ್ದಾರಿ ಕಾಮಗಾರಿಯಿಂದ ವಿದ್ಯುತ್ ಕಂಬಗಳು ಗಾಳಿಮಳೆಗೆ ಧರೆಗೆ ಉರುಳಿ ಬಿದ್ದಿವೆ. ಅಲ್ಲೇ ಸಮೀಪ ಮನೆಯೊಂದರ ಮೇಲೆ ಮರ ಬಿದ್ದಿರುವ ಬಗ್ಗೆ ವರದಿಯಾಗಿದೆ. ಇಲ್ಲಿ ರಸ್ತೆ ಬದಿ ಹಾಕಲಾಗಿರುವ ಮಣ್ಣು ಮಳೆಯಿಂದ ಕೊಚ್ಚಿ ಹೋಗಿ ಸಮೀಪದ ಮನೆಯ ಅಂಳಗಳಿಗೆ ಬಿದ್ದಿವೆ.









