ಪ.ಬಂಗಾಳದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಇಂದು ಎಐಐಎಂಎಸ್ ನಿವಾಸಿ ವೈದ್ಯರ ಪ್ರತಿಭಟನೆ

ಹೊಸದಿಲ್ಲಿ, ಜೂ.13: ಪಶ್ಚಿಮ ಬಂಗಾಳದಲ್ಲಿ ತಮ್ಮ ಸಹೋದ್ಯೋಗಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಜೂನ್ 14ರಂದು ಕೆಲಸ ಬಹಿಷ್ಕರಿಸುವುದಾಗಿ ಎಐಐಎಂಎಸ್‌ನ ನಿವಾಸಿ ವೈದ್ಯರು(ರೆಸಿಡೆಂಟ್ ಡಾಕ್ಟರ್ಸ್) ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಿಂಸಾಚಾರವನ್ನು ಖಂಡಿಸಿರುವ ಎಐಐಎಂಎಸ್‌ನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(ಆರ್‌ಡಿಎ), ಶುಕ್ರವಾರ ನಡೆಯಲಿರುವ ಸಾಂಕೇತಿಕ ಮುಷ್ಕರಕ್ಕೆ ಕೈಜೋಡಿಸುವಂತೆ ದೇಶದಾದ್ಯಂತದ ಆರ್‌ಡಿಎಗಳಿಗೆ ಕರೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಸ್ಟೆಲ್‌ನಲ್ಲಿರುವ ವೈದ್ಯರ ಮೇಲೆಯೂ ಆಯುಧದಾರಿಗಳ ಗುಂಪು ದಾಳಿ ನಡೆಸುತ್ತಿದೆ. ವೈದ್ಯರಿಗೆ ರಕ್ಷಣೆ ನೀಡಲು ಸರಕಾರ ವಿಫಲವಾಗಿದೆ ಎಂದು ಸಂಘದ ಹೇಳಿಕೆಯಲ್ಲಿ ತಿಳಿಸಿದ್ದು, ತಕ್ಷಣ ಮಧ್ಯಪ್ರವೇಶಿಸಿ ವೈದ್ಯರಿಗೆ ಸುರಕ್ಷತೆ ಖಾತರಿಪಡಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಆಗ್ರಹಿಸಲಾಗಿದೆ.
ಜೂನ್ 14ರಂದು ನಡೆಯುವ ಮುಷ್ಕರದಲ್ಲಿ ಒಪಿಡಿ , ದಿನನಿತ್ಯದ ಹಾಗೂ ವಾರ್ಡ್ ಸೇವೆ ಒಳಗೊಂಡಿರುತ್ತದೆ. ಆದರೆ ತುರ್ತು ಸೇವೆಯನ್ನು ಮುಷ್ಕರದಿಂದ ಹೊರಗಿಡಲಾಗಿದೆ ಎಂದು ತಿಳಿಸಲಾಗಿದೆ. ಜೂನ್ 14ರಂದು ಕರಿಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಎಲ್ಲಾ ರಾಜ್ಯಗಳಲ್ಲಿರುವ ಸದಸ್ಯರಿಗೆ ಕರೆ ನೀಡಿದೆ. ಜಿಲ್ಲಾಧಿಕಾರಿ ಕಚೇರಿಯೆದುರು ಬೆಳಿಗ್ಗೆ 10ರಿಂದ 12ರವರೆಗೆ ಪ್ರತಿಭಟನೆ ನಡೆಸಿ ವೈದ್ಯರ ಮೇಲೆ ನಡೆಸುವ ಹಲ್ಲೆಯಿಂದ ರಕ್ಷಣೆ ಒದಗಿಸುವಂತೆ ಕೇಂದ್ರ ಗೃಹ ಸಚಿವರಿಗೆ ಹಾಗೂ ಪ್ರಧಾನಿಯವರಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸುವಂತೆ ಐಎಂಎ ತಿಳಿಸಿದೆ. ಗುರುವಾರ ದಿಲ್ಲಿ ಮೆಡಿಕಲ್ ಅಸೋಸಿಯೇಷನ್‌ನ ಸದಸ್ಯರೂ ಕಪ್ಪು ದಿನ ಆಚರಿಸಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ರಾತ್ರಿ ಕೋಲ್ಕತಾದ ಸರಕಾರಿ ಸ್ವಾಮ್ಯದ ಎನ್‌ಆರ್‌ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಓರ್ವ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ರೋಗಿಯ ಸಂಬಂಧಿಕರು ಓರ್ವ ತರಬೇತಿ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.







