ವ್ಯಾಪಾರಿಯಿಂದ ಸುಲಿಗೆ: ಮಾಜಿ ಸಂಸದ ಆತೀಕ್ ಅಹ್ಮದ್ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ, ಜೂ.13: ವ್ಯಾಪಾರಿಯಿಂದ ಹಣ ಸುಲಿಗೆ ಮಾಡುವ ಮತ್ತು ಅವರ ವ್ಯವಹಾರವನ್ನು ತಮ್ಮ ಹೆಸರಿಗೆ ಮಾಡುವ ಉದ್ದೇಶದಿಂದ ಜೈಲಿನಲ್ಲೇ ಕುಳಿತು ಸಂಚು ರೂಪಿಸಿದ ಆರೋಪದಲ್ಲಿ ಮಾಜಿ ಸಂಸದ ಆತಿಕ್ ಅಹ್ಮದ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಸಮಾಜವಾದಿ ಪಕ್ಷದ ಉತ್ತರ ಪ್ರದೇಶದ ಸಂಸದರಾಗಿರುವ ಅಹ್ಮದ್ ವಿರುದ್ಧ ಕ್ರಿಮಿನಲ್ ಸಂಚು, ಸುಲಿಗೆ, ವಂಚನೆ, ನಕಲು, ಕಳ್ಳತನ ಮತ್ತು ಬೆದರಿಕೆ ಪ್ರಕರಣಗಳಡಿ ದೂರು ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಆತೀಕ್ ಅಹ್ಮದ್ ಕಳೆದ ಎರಡು ವರ್ಷಗಳಿಂದ ಹಣ ನೀಡುವಂತೆ ನನಗೆ ಬೆದರಿಕೆ ಹಾಕುತ್ತಿದ್ದ ಎಂದು ಲಕ್ನೋದ ಗೋಮತಿನಗರದಲ್ಲಿ ರಿಯಲ್ ಎಸ್ಟೇಟ್ ಡೀಲರ್ ಆಗಿರುವ ಮೋಹಿತ್ ಜೈಸ್ವಾಲ್ ಆರೋಪಿಸಿದ್ದಾರೆ. ಆರಂಭದಲ್ಲಿ ಕೆಲವು ಬಾರಿ ಹಣ ನೀಡಿದ್ದೆ ನಂತರ ಇಂತಹ ಬೇಡಿಕೆಗಳು ಬರುವುದು ನಿಂತಿತು. ಆದರೆ 2018ರಲ್ಲಿ ಮತ್ತೆ ಅಹ್ಮದ್ ಹಣಕ್ಕಾಗಿ ಬೇಡಿಕೆಯಿಡಲು ಆರಂಭಿಸಿದ ಎಂದು ಜೈಸ್ವಾಲ್ ಆರೋಪಿಸಿದ್ದಾರೆ.
ನನ್ನ ಮತ್ತು ನನ್ನ ಸಹೋದರಿಯ ಡಿಜಿಟಲ್ ಸಹಿ ಪಡೆಯುವ ಮೂಲಕ ನನ್ನ ವ್ಯವಹಾರವನ್ನು ಅಹ್ಮದ್‌ನ ಸಹಚರರು ಕೈವಶ ಮಾಡಿಕೊಂಡಿದ್ದರು. ಆದರೆ ಇಂತಹ ಒತ್ತಡದ ನಡುವೆಯೂ ನಾನು ಅವರಿಗೆ ನನ್ನ ಶೇರುಗಳನ್ನು ವರ್ಗಾವಣೆ ಮಾಡಿರಲಿಲ್ಲ ಎಂದು ಜೈಸ್ವಾಲ್ ತಿಳಿಸಿದ್ದಾರೆ. 2018ರ ಡಿಸೆಂಬರ್ 26ರಂದು ಅಹ್ಮದ್‌ನ ಸಹಚರರು ನನ್ನನ್ನು ನನ್ನದೇ ವಾಹನದಲ್ಲಿ ಅಹ್ಮದ್ ಬಂಧಿಯಾಗಿದ್ದ ದಿಯೋರ ಜೈಲಿಗೆ ಕೊಂಡೊಯ್ದಿದ್ದರು. ಅಲ್ಲಿ ಆತನ ಪುತ್ರ ಉಮರ್ ಮತ್ತು 10-12 ಇತರರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಜೈಸ್ವಾಲ್ ಆರೋಪಿಸಿದ್ದಾರೆ.
ರಿಯಲ್ ಎಸ್ಟೇಟ್ ಡೀಲರ್ ಮೋಹಿತ್ ಜೈಸ್ವಾಲ್ ಅವರನ್ನು ಲಕ್ನೋದಿಂದ ಅಪಹರಿಸಿ ದಿಯೋರ ಜೈಲಿಗೆ ಕೊಂಡೊಯ್ಯಲಾಗಿತು. ಅಲ್ಲಿ ಅವರ ಮೇಲೆ ಅಹ್ಮದ್ ಮತ್ತವರ ಸಹಚರರು ಹಲ್ಲೆ ನಡೆಸಿದ್ದರು ಮತ್ತು ಜೈಸ್ವಾಲ್ ವ್ಯವಹಾರವನ್ನು ತಮಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಎರಡು ಪಂಕೆನಿಗಳನ್ನು ಈಗಾಗಲೇ ಅಹ್ಮದ್ ಸಹಚರರಾದ ಫಾರೂಕ್ ಮತ್ತು ಝಕಿ ಅಹ್ಮದ್ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಈ ಕಂಪೆನಿಗಳ ಒಟ್ಟು ವೌಲ್ಯ 45 ಕೋಟಿ ರೂ. ಎಂದು ಜೈಸ್ವಾಲ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.







