ಐಎಂಎ ಕಚೇರಿಗೆ ಬೀಗ ಮುದ್ರೆ ಜಡಿದ ಪೊಲೀಸರು
ಬಹುಕೋಟಿ ವಂಚನೆ ಪ್ರಕರಣ

ಬೆಂಗಳೂರು, ಜೂ.13: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಶಿವಾಜಿ ನಗರದಲ್ಲಿರುವ ಐಎಂಎ ಜ್ಯುವೆಲರ್ಸ್ ಕಚೇರಿಗೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರು ಅಧಿಕೃತವಾಗಿ ಇಂದು ಬೀಗ ಮುದ್ರೆ ಹಾಕಿದ್ದಾರೆ.
ಇದೇ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಐಎಂಎ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್‌ಗೆ ಸೇರಿದ್ದು ಎನ್ನಲಾದ ಬಿಳಿ ಬಿಣ್ಣದ ಐಷಾರಾಮಿ ರೇಂಜ್ ರೋವರ್ ಕಾರ್(ಪಿವೈ 05 ಸಿ 7777)ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮನ್ಸೂರ್ ಖಾನ್ ತನ್ನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆಡಿಯೋ ವೈರಲ್ ಆಗುವ ಮುನ್ನವೇ ಕುಟುಂಬ ಸಮೇತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿತ್ತು. ಇದೀಗ, ಆತನದ್ದು ಎನ್ನುತ್ತಿರುವ ಕಾರು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪಾಂಡಿಚೇರಿಯಲ್ಲಿ ನೋಂದಣಿಯಾಗಿರುವ ಈ ಐಷಾರಾಮಿ ಕಾರು, ಮನ್ಸೂರ್ ಖಾನ್ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಜೂ.6ರಂದು ಈ ಕಾರು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದೆ. ಇಷ್ಟು ದಿನಗಳಾದರೂ ಯಾರೊಬ್ಬರೂ ಈ ಐಷಾರಾಮಿ ಕಾರನ್ನು ತೆಗೆದುಕೊಂಡು ಹೋಗಲು ಬಾರದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಶೀಲನೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಫ್ರಂಟ್ ಲೈನ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ: ಐಎಂಎ ವತಿಯಿಂದಲೇ ನಡೆಸಲಾಗುತ್ತಿದ್ದ ಫ್ರಂಟ್ ಲೈನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆಗಾಗಿ ಹಣ ಪಾವತಿಸಿ ದಾಖಲಾಗಿರುವ ರೋಗಿಗಳಿಗೆ ಈಗ ಫ್ರಂಟ್ ಲೈನ್ ಫಾರ್ಮದಲ್ಲಿ ಔಷಧಿಗಳು ಸಿಗುತ್ತಿಲ್ಲ. ಇದರಿಂದಾಗಿ, ರೋಗಿಗಳು ಹಾಗೂ ಅವರ ಸಂಬಂಧಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.







