ಐಎಂಎ ದತ್ತು ಪಡೆದಿದ್ದ ಶಾಲೆಯ 940 ಮಕ್ಕಳ ಭವಿಷ್ಯ ಅತಂತ್ರ
ಬಹುಕೋಟಿ ವಂಚನೆ ಪ್ರಕರಣ

ಬೆಂಗಳೂರು, ಜೂ.13: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಮತ್ತೊಂದು ಕರಾಳ ಮುಖ ಬಯಲಾಗಿದೆ. ಐಎಂಎ ಸಂಸ್ಥೆ ದತ್ತು ಪಡೆದಿದ್ದ ಶಿವಾಜಿನಗರದ ವಿಕೆಓ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 940 ಮಕ್ಕಳ ಭವಿಷ್ಯದ ಮೇಲೆ ಈ ವಂಚನೆ ಪ್ರಕರಣದ ಪರಿಣಾಮ ಬೀರಿದೆ.
ಐಎಂಎ ಮುಖ್ಯಸ್ಥ ಮುಹಮ್ಮದ್ ಮನ್ಸೂರ್ ಖಾನ್, ಎರಡು ವರ್ಷಗಳ ಹಿಂದೆ ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದ. 1ನೇ ತರಗತಿಯಿಂದ 7ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಈ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಐಎಂಎ ಈ ಶಾಲೆಯನ್ನು ಅಭಿವೃದ್ಧಿಪಡಿಸಿದ ಬಳಿಕ ನರ್ಸರಿಯಿಂದ ಪಿಯುಸಿವರೆಗೆ ಶಾಲೆಯ ಚಟುವಟಿಕೆಗಳನ್ನು ವಿಸ್ತರಿಸಲಾಗಿತ್ತು.
ಉರ್ದು ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನು ಈ ಶಾಲೆಯಲ್ಲಿ ಬೋಧಿಸಲಾಗುತಿತ್ತು. ಯಾವ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಕಡಿಮೆ ಇಲ್ಲದಂತೆ ಮೂಲಸೌಕರ್ಯಗಳನ್ನು ಈ ಶಾಲೆಗೆ ಒದಿಸಲಾಗಿತ್ತು. ಭದ್ರತಾ ಸಿಬ್ಬಂದಿ, ಎಲ್ಲ ತರಗತಿಗಳ ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮೆರಾ, ಊಟದ ಕೋಣೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಲಾಗಿತ್ತು.
ಸರಕಾರದಿಂದ ಕೇವಲ ಮೂವರು ಶಿಕ್ಷಕರನ್ನು ಮಾತ್ರ ಈ ಶಾಲೆಗೆ ನೇಮಿಸಲಾಗಿದ್ದು, ಇನ್ನುಳಿದಂತೆ 73 ಶಿಕ್ಷಕರು ಸೇರಿದಂತೆ ಇನ್ನಿತರ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ಮನ್ಸೂರ್ ಖಾನ್ ನೇಮಕ ಮಾಡಿಕೊಂಡಿದ್ದರು. ಸರಾಸರಿ ಪ್ರತಿ ತಿಂಗಳು ಈ ಶಿಕ್ಷಕರು, ಸಿಬ್ಬಂದಿಗಳ ವೇತನ ಸೇರಿದಂತೆ ಇನ್ನಿತರ ವೆಚ್ಚಗಳಿಗಾಗಿ ಸುಮಾರು 32 ಲಕ್ಷ ರೂ.ಗಳನ್ನು ಐಎಂಎ ವೆಚ್ಚ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.
ಇದೀಗ ಮನ್ಸೂರ್ ಖಾನ್ ನಾಪತ್ತೆಯಾಗಿರುವುದರಿಂದ, ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರದಿಂದ ನೇಮಕವಾಗಿರುವ ಮೂವರು ಶಿಕ್ಷಕರು 940 ಮಕ್ಕಳನ್ನು ಶಾಲೆಯಲ್ಲಿ ನಿರ್ವಹಿಸುವುದು ಕಷ್ಟಸಾಧ್ಯ ಎಂದು ಶಾಲೆಯ ಪ್ರಾಂಶುಪಾಲೆ ನಫೀಸ್ ಉನ್ನಿಸಾ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಅವರ ನಿರ್ದೇಶನದ ಮೇರೆಗೆ ಅನಿವಾರ್ಯವಾಗಿ ಶಾಲೆಗೆ ಎರಡು ದಿನಗಳ ಕಾಲ ರಜೆ ನೀಡಲಾಗಿದೆ ಎಂದು ಅವರು ಹೇಳಿದರು.







