ವೈದ್ಯರ ಪ್ರತಿಭಟನೆಗೆ ಕೈಜೋಡಿಸಿದ ಐಎಂಎ

ಕೋಲ್ಕತ್ತ, ಜೂ.13: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಬೆಂಬಲ ಸೂಚಿಸಿದೆ. ಪ್ರತಿಭಟನಾನಿರತ ವೈದ್ಯರಿಗೆ ಬೆಂಬಲ ಸೂಚಿಸಲು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯ ಎಲ್ಲ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಶುಕ್ರವಾರದಂದು ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸುವಂತೆ ಎಲ್ಲ ರಾಜ್ಯಗಳ ತನ್ನ ಸದಸ್ಯರಿಗೆ ಐಎಂಎ ನಿರ್ದೇಶನ ನೀಡಿತ್ತು. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ಎಐಐಎಂಎಸ್ ಕಿರಿಯ ವೈದ್ಯರ ಸಂಘಟನೆ (ಆರ್ಡಿಎ) ದೇಶಾದ್ಯಂತವಿರುವ ಎಲ್ಲ ಕಿರಿಯ ವೈದ್ಯರು ಸೂಚ್ಯ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ. ವೈದ್ಯರ ಮೇಲೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಆತಂಕಕಾರಿ ಮತ್ತು ಖೇದಕರ ಎಂದು ಗುರುವಾರ ನೀಡಿದ ಹೇಳಿಕೆಯಲ್ಲಿ ಎಐಐಎಂಎಸ್ ಆರ್ಡಿಎ ತಿಳಿಸಿದೆ.
Next Story