'ಐಎಂಎ' ತನಿಖೆ ಚುರುಕುಗೊಳಿಸಿದ ಸಿಟ್: 1,230 ಕೋಟಿ ರೂ. ಹೂಡಿಕೆ ?
ಸಂಸ್ಥೆ ವಿರುದ್ಧ 23 ಸಾವಿರಕ್ಕೂ ಅಧಿಕ ದೂರು ದಾಖಲು !

ಬೆಂಗಳೂರು, ಜೂ.13: ಐಎಂಎ ಸಮೂಹ ಸಂಸ್ಥೆ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಸಿಟ್(ಎಸ್‌ಐಟಿ), ಈ ಸಂಸ್ಥೆಯಲ್ಲಿ ಸುಮಾರು 21 ಸಾವಿರ ಜನರು, ಸುಮಾರು 1,230 ಕೋಟಿ ರೂ.ಹೂಡಿಕೆ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಸಂಸ್ಥೆಯ ನಿರ್ದೇಶಕರುಗಳಾದ ನಿಜಾಮುದ್ದೀನ್ ಖಾನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಅರ್ಷದ್ ಖಾನ್, ಅನ್ಸರ್ ಪಾಷಾ, ವಾಸಿಂ ಹಾಗೂ ದಾದಪೀರ್ ಎಂಬುವರನ್ನು ವಶಕ್ಕೆ ಪಡೆದು, ಕಸ್ಟಡಿಗೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆಯಲ್ಲದೇ, ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.
ಸಭೆ: ಗುರುವಾರ ಇಲ್ಲಿನ ಕೆಎಸ್ಸಾರ್ಪಿ ಸಂಶೋಧನಾ ಸಂಸ್ಥೆಯಲ್ಲಿ ರವಿಕಾಂತೇಗೌಡ ಅವರ ನೇತೃತ್ವದಲ್ಲಿ ಸಿಟ್ ತನಿಖಾ ತಂಡದ ಮೊದಲ ಸಭೆ ನಡೆಯಿತು. ತನಿಖೆಯ ವಿವಿಧ ಹಂತಗಳ ಕುರಿತು ಚರ್ಚಿಸಲಾಯಿತು.
ಒಂದೇ ದಿನ 7 ಸಾವಿರಕ್ಕೂ ಅಧಿಕ ದೂರು
ಐಎಂಎ ವಿರುದ್ಧ ಸತತ ನಾಲ್ಕು ದಿನಗಳಿಂದ ಸಾವಿರಾರು ಮಂದಿ ದೂರು ದಾಖಲಿಸುತ್ತಿದ್ದು, ಗುರುವಾರವೂ 7 ಸಾವಿರಕ್ಕೂ ಅಧಿಕ ಮಂದಿ ದೂರು ನೀಡಿದರು. ಇದುವರೆಗೂ 23 ಸಾವಿರಕ್ಕೂ ಅಧಿಕ ದೂರಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.







