ವಿಶ್ವವಿದ್ಯಾಲಯಗಳ ಕಮಿಟಿಯಲ್ಲಿ ಕೈಗಾರಿಕೋದ್ಯಮಿಗಳ ನೇಮಕ ಅಗತ್ಯ: ಸಚಿವ ಜಿ.ಟಿ.ದೇವೇಗೌಡ

ಬೆಂಗಳೂರು, ಜೂ.13: ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮೌಲ್ಯಾಧಾರಿತ ಹಾಗೂ ಕೌಶಲ್ಯಾಧಾರಿತ ಕ್ಷೇತ್ರವನ್ನು ಪರಿವರ್ತಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿರುವ ಕಮಿಟಿಗಳಲ್ಲಿ ಕೈಗಾರಿಕೋದ್ಯಮಿಗಳನ್ನು ಕಡ್ಡಾಯವಾಗಿ ನೇಮಿಸುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಗುರುವಾರ ಎಫ್‌ಕೆಸಿಸಿಐ ವತಿಯಿಂದ ನಗರದಲ್ಲಿ ಆಯೋಸಿದ್ದ 11ನೆ ವರ್ಷದ ಮಂಥನ್ ಯೋಜನಾ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಇವತ್ತಿನ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಇಲ್ಲವಾಗಿದೆ. ಇದು ನಿರುದ್ಯೋಗಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನಗೆ ಉನ್ನತ ಶಿಕ್ಷಣ ಇಲಾಖೆ ಕೊಟ್ಟಾಗ, ಮೊದಲಿಗೆ ಭಯವಾಯಿತು. ಅಲ್ಲಿ ಎಲ್ಲ ವ್ಯವಸ್ಥೆಯು ಉನ್ನತವಾಗಿರುತ್ತದೆ ಎಂದು ಭಾವಿಸಿದ್ದೆ. ಆದರೆ, ಉನ್ನತ ಶಿಕ್ಷಣ ನಾವು ನಿರೀಕ್ಷಿಸಿದಂತೆ ಇಲ್ಲ. ಕೌಶಲ್ಯಾಧಾರಿತ ಶಿಕ್ಷಣವಿಲ್ಲದೆ ಇಲ್ಲಿಂದ ತೇರ್ಗಡೆಯಾಗುವ ಬಹುತೇಕ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಮ್ಮಲ್ಲಿ ಕೈಗಾರಿಕೆ, ಶಿಕ್ಷಣ ಹಾಗೂ ಕೃಷಿಯ ನಡುವೆ ಪರಸ್ಪರ ಪೂರಕವಾದ ವಾತಾವರಣ ನಿರ್ಮಿಸಬೇಕಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೆ ಕೈಗಾರಿಕೆಗಳ ಜೊತೆಗೆ ನಿಕಟ ಸಂಪರ್ಕ ಬೆಳೆಸುವ ಅಗತ್ಯವಿದೆ. ಇದರಿಂದ ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿರುವ ಹಲವು ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇರಲಿಲ್ಲ. ಕಾಲೇಜಿನಲ್ಲಿರುವ ಹಿರಿಯ ಪ್ರಾಧ್ಯಾಪಕರನ್ನೆ ಪ್ರಾಂಶುಪಾಲರನ್ನಾಗಿ ತಾತ್ಕಾಲಿಕವಾಗಿ ನೇಮಿಸಲಾಗಿತ್ತು. ಹಾಗೂ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರು ಕೊರತೆಯು ಇತ್ತು. ಹೀಗಾಗಿ ನಾನು 396 ಪ್ರಾಂಶುಪಾಲರು ಹಾಗೂ 3800 ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದ್ದೇನೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಎಫ್‌ಕೆಸಿಸಿಐನ ನೂತನ ಅಧ್ಯಕ್ಷರಾಗಲಿರುವ ಜನಾರ್ದನ, ಉಪಾಧ್ಯಕ್ಷ ಪೆರಿಕಲ್ ಎಂ.ಸುಂದರ್, ಮಂಥನ್ ಅಧ್ಯಕ್ಷ ಸುಜ್ಞಾನ್ ಹಿರೇಮಠ್ ಮತ್ತಿತರರಿದ್ದರು.
ಸರಕಾರಿ ವ್ಯವಸ್ಥೆಯಲ್ಲಿ ಕೇವಲ ಅರ್ಜಿ ಸಲ್ಲಿಸಿದ ತಕ್ಷಣ ಎಲ್ಲವೂ ದಿಢೀರನೆ ಆಗುವುದಿಲ್ಲ. ಯಾವುದೆ ಕೆಲಸ ಕಾರ್ಯಗಳಿಗೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ ನಂತರ ಹಂತ, ಹಂತವಾಗಿ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ. ಇಲ್ಲದೆ ಹೋದರೆ ಎಷ್ಟೆ ಪ್ರಭಾವಿಗಳಾಗಿದ್ದರೂ ಯಾವುದೆ ಕೆಲಸ ಆಗುವುದಿಲ್ಲ. ಹೀಗಾಗಿ ಎಫ್‌ಕೆಸಿಸಿಐ ಪದಾಧಿಕಾರಿಗಳು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯ.
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ







