ಎವರೆಸ್ಟ್ ಆರೋಹಿಗಳ ಸಾವಿಗೆ ದಟ್ಟಣೆ ಕಾರಣವಲ್ಲ: ನೇಪಾಳ
ಕಠ್ಮಂಡು (ನೇಪಾಳ), ಜೂ. 13: ಈ ವರ್ಷದ ಆರೋಹಣ ಋತುವಿನಲ್ಲಿ ಮೌಂಟ್ ಎವರೆಸ್ಟ್‌ನಲ್ಲಿ ಸಂಭವಿಸಿದ ಸಾವುಗಳಿಗೆ ಅತಿ ಎತ್ತರದಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾರಣವೇ ಹೊರತು ಜನದಟ್ಟಣೆಯಲ್ಲ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ಗುರುವಾರ ಹೇಳಿದೆ.
ಆರೋಹಿಗಳ ಸುರಕ್ಷತೆಗೆ ಗಮನ ನೀಡದೆ, ಜಗತ್ತಿನ ಅತಿ ಎತ್ತರದ ಶಿಖರವನ್ನೇರಲು ಅತಿ ಹೆಚ್ಚಿನ ಪರ್ಮಿಟ್‌ಗಳನ್ನು ನೀಡಿರುವುದಕ್ಕಾಗಿ ನೇಪಾಳದ ಪ್ರವಾಸೋದ್ಯಮ ಇಲಾಖೆಯು ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ನಡುವೆಯೇ, ಅದು ಈ ಹೇಳಿಕೆಯನ್ನು ನೀಡಿದೆ ಎಂದು ‘ಹಿಮಾಲಯನ್ ಟೈಮ್ಸ್’ ವರದಿ ಮಾಡಿದೆ.
‘‘ಎವರೆಸ್ಟ್‌ನಲ್ಲಿ ಸಂಭವಿಸಿದ ಸಾವುಗಳಿಗೆ ತಪ್ಪು ಕಾರಣಗಳನ್ನು ನೀಡಿರುವುದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವರದಿಗಳತ್ತ ನಮ್ಮ ಗಮನ ಸೆಳೆಯಲಾಗಿದೆ’’ ಎಂದು ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ದಂಡು ರಾಜ್ ಘಿಮಿರೆ ಹೇಳಿದರು. ಎವರೆಸ್ಟ್‌ನಲ್ಲಿ ಸಂಭವಿಸಿದ ಸಾವುಗಳಿಗೆ ‘ಟ್ರಾಫಿಕ್ ಜಾಮ್’ ಕಾರಣವಾಗಿರಲಿಲ್ಲ ಎಂದು ಹೇಳಿಕೊಂಡರು.
ಆರೋಹಿಗಳು ಅತಿ ಎತ್ತರದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು, ನಿತ್ರಾಣ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಮೃತಪಟ್ಟಿದ್ದಾರೆ ಎಂಬುದಾಗಿ ಅವರ ಮರಣೋತ್ತರ ಪರೀಕ್ಷೆ ವರದಿಗಳು ಹೇಳುತ್ತಿವೆ ಎಂದು ಘಿಮಿರೆ ನುಡಿದರು.
ಈ ಆರೋಹಣ ಋತುವಿನಲ್ಲಿ, 11 ಆರೋಹಿಗಳು ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಗಳು ತಿಳಿಸಿವೆ.
ಪರ್ಮಿಟ್‌ಗಳ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವೇನೂ ಇಲ್ಲ
ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಹಣ ಪರ್ಮಿಟ್‌ಗಳನ್ನು ನೀಡಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ಆರೋಹಿಗಳು ಬಳಲಿ ಪ್ರಾಣ ಬಿಟ್ಟಿದ್ದಾರೆ ಎಂಬುದಾಗಿ ಹಲವು ವರದಿಗಳು ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಇಲಾಖೆಯು, 2017ರಲ್ಲಿ 366 ಆರೋಹಣ ಪರ್ಮಿಟ್‌ಗಳನ್ನು ನೀಡಲಾಗಿದ್ದರೆ, 2018ರಲ್ಲಿ 346 ಪರ್ಮಿಟ್‌ಗಳನ್ನು ಕೊಡಲಾಗಿತ್ತು ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ವರ್ಷ 381 ಪರ್ಮಿಟ್‌ಗಳನ್ನು ನೀಡಲಾಗಿದ್ದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದು ಅದು ಹೇಳಿದೆ.
200ಕ್ಕೂ ಅಧಿಕ ಸಾವು
1922ರ ಬಳಿಕ ಮೌಂಟ್ ಎವರೆಸ್ಟ್‌ನಲ್ಲಿ 200ಕ್ಕೂ ಅಧಿಕ ಪರ್ವತಾರೋಹಿಗಳು ಸಾವಿಗೀಡಾಗಿದ್ದಾರೆ. ಆ ವರ್ಷದಿಂದ ಎವರೆಸ್ಟ್‌ನಲ್ಲಿ ಸಂಭವಿಸಿದ ಸಾವುಗಳನ್ನು ದಾಖಲಿಸಲಾಗುತ್ತಿದೆ.
ಹೆಚ್ಚಿನ ಮೃತದೇಹಗಳು ಹಿಮ ಅಥವಾ ನೀರ್ಗಲ್ಲುಗಳಡಿಯಲ್ಲಿ ಹೂತುಹೋಗಿವೆ ಎಂಬುದಾಗಿ ಭಾವಿಸಲಾಗಿದೆ.