ವಿಂಡೀಸ್ ವಿರುದ್ಧ ಪ್ರಾಬಲ್ಯ ಮುಂದುವರಿಸಲು ಇಂಗ್ಲೆಂಡ್ ಚಿತ್ತ

ಸೌತಾಂಪ್ಟನ್, ಜೂ.13: ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ದಾಖಲೆ ಕಾಯ್ದುಕೊಂಡಿರುವ ಆತಿಥೇಯ ಇಂಗ್ಲೆಂಡ್ ತಂಡ ಶುಕ್ರವಾರ ಇಲ್ಲಿ ನಡೆಯಲಿರುವ ವಿಶ್ವಕಪ್‌ನ 18ನೇ ಪಂದ್ಯದಲ್ಲಿ ಪ್ರಾಬಲ್ಯ ಮುಂದುವರಿಸುವತ್ತ ಚಿತ್ತವಿರಿಸಿದೆ.
ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ ಬಳಿಕ ಬೇಗನೆ ಎಚ್ಚೆತ್ತುಕೊಂಡ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಮೊದಲಿಗೆ 6 ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿತು. ಆ ಬಳಿಕ ಬಾಂಗ್ಲಾವನ್ನು 49ನೇ ಓವರ್‌ನಲ್ಲಿ 280 ರನ್‌ಗೆ ನಿಯಂತ್ರಿಸಿತು. ಬಾಂಗ್ಲಾ ವಿರುದ್ಧ ಆರಂಭಿಕ ಆಟಗಾರರು ದಿಟ್ಟ ಪ್ರದರ್ಶನ ನೀಡಿದ್ದು ಜೇಸನ್ ರಾಯ್ 153 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ ಸ್ಟೋಕ್ಸ್ ಅಮೂಲ್ಯ ಕೊಡುಗೆ ನೀಡಿದರು. ವೆಸ್ಟ್ ಇಂಡೀಸ್ ಪಾಳಯದಲ್ಲಿ ಎಡಗೈ ದಾಂಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸ್ಪಿನ್ನರ್ ಮೊಯಿನ್ ಅಲಿ ಆಡುವ 11ರ ಬಳಗಕ್ಕೆ ವಾಪಸಾಗುವ ಸಾಧ್ಯತೆಯಿದೆ.
ಮತ್ತೊಂದೆಡೆ, ವೆಸ್ಟ್‌ಇಂಡೀಸ್ ಬೌಲರ್‌ಗಳು ಈ ತನಕ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆದರೆ, ಬ್ಯಾಟಿಂಗ್ ವಿಭಾಗ ಕೈಕೊಡುತ್ತಾ ಬಂದಿದೆ. ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಇದು ಸಾಬೀತಾಗಿತ್ತು. ದಕ್ಷಿಣ ಆಫ್ರಿಕ ವಿರುದ್ಧ ಮಳೆಬಾಧಿತ ಪಂದ್ಯದಲ್ಲಿ ವಿಂಡೀಸ್ ಬೌಲರ್‌ಗಳು ಉತ್ತಮ ಆರಂಭ ಪಡೆದಿದ್ದು, ಶೆಲ್ಡನ್ ಕಾಟ್ರೆಲ್ ಬೇಗನೆ ಎರಡು ವಿಕೆಟ್ ಉರುಳಿಸಿದ್ದರು. ಇಂಗ್ಲೆಂಡ್ ಬ್ಯಾಟಿಂಗ್ ಸರದಿ ಬಲಿಷ್ಠವಾಗಿರುವ ಕಾರಣ ವಿಂಡೀಸ್ ದಾಂಡಿಗರು ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ವಿಶ್ವಕಪ್ ಆರಂಭವಾಗಲು ಒಂದು ವಾರ ಬಾಕಿ ಇರುವಾಗ ಏಕದಿನ ಕ್ರಿಕೆಟಿಗೆ ಕಾಲಿಟ್ಟಿದ್ದ ವಿಂಡೀಸ್ ಮೂಲದ ಜೊಫ್ರಾ ಆರ್ಚರ್ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದು ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆರ್ಚರ್ ಸತತವಾಗಿ ಗಂಟೆಗೆ 90 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ







