ಸರೋಜಿನಿ ಮಹಿಷಿ ವರದಿ ಕೈ ಬಿಟ್ಟ ವಿಚಾರ: ಚಿಂತಕರು, ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ
ಹೊಸ ಕರಡು ರೂಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು, ಜೂ.14: ಸರೋಜಿನಿ ಮಹಿಷಿ ವರದಿ ಶಿಫಾರಸುಗಳನ್ನು ಕೈ ಬಿಟ್ಟು ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಕೈಗಾರಿಕಾ ಉದ್ಯೋಗ ನೀತಿಯ ತಿದ್ದುಪಡಿ ಕರಡು ವಿರುದ್ಧ ಚಿಂತಕರು, ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಪುರಭವನದ ಮುಂಭಾಗ ಕರ್ನಾಟಕ ವಿಕಾಸ ರಂಗ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ರಾಜ್ಯ ಸರಕಾರ ತಿದ್ದುಪಡಿ ಕರಡಿನಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿ ಉದ್ಯಮ ಸ್ನೇಹಿ ನಿಲುವು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ, ಬೇರೆ ರಾಜ್ಯಗಳಲ್ಲಿ ಸರಕಾರಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದೆ. ಆದರೆ, ಇಲ್ಲಿನ ರಾಜ್ಯ ಸರಕಾರ ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ವ್ಯತಿರಿಕ್ತವಾದ ಪರಿಸ್ಥಿತಿ ಇರುವುದರಿಂದ ಕನ್ನಡಿಗರು ಇದನ್ನು ವಿರೋಧಿಸಬೇಕಿದೆ ಎಂದರು.
ಸಾಹಿತಿ ಭೈರಮಂಗಲ ರಾಮೇಗೌಡ ಮಾತನಾಡಿ, ಸರಕಾರ ಮಹಿಷಿ ವರದಿಯನ್ನು ಅನುಕೂಲಕ್ಕೆ ತಕ್ಕಂತೆ ತಿರುಚಿದೆ. ಅನ್ಯ ಭಾಷಿಕರು, ಅಧಿಕಾರಿಗಳು ಹಾಗೂ ಉದ್ಯಮಿಗಳ ಒತ್ತಡಕ್ಕೆ ಮಣಿದು ಈ ತಿದ್ದುಪಡಿ ಕರಡು ತಯಾರಿಸಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರಂಗದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ ಸೇರಿದಂತೆ ಪ್ರಮುಖರಿದ್ದರು.
‘ಮುಖ್ಯಮಂತ್ರಿಗೆ ಒತ್ತಾಯ’
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಮುಖ್ಯಮಂತ್ರಿಯವರ ಬಳಿ ನಿಯೋಗ ತೆರಳಿದ್ದು, ಕರಡನ್ನು ರದ್ದು ಮಾಡಿ ಹೊಸ ಕರಡು ರೂಪಿಸುವಂತೆ ಒತ್ತಾಯ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ತಿಳಿಸಿದರು.
ವರದಿಯಲ್ಲಿ ಇರುವುದು?
ಕನಿಷ್ಠ 10ನೇ ತರಗತಿವರೆಗೂ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿರುವವರನ್ನು ಕನ್ನಡಿಗರೆಂದು ಪರಿಗಣಿಸಬೇಕು ಎಂದು ಮಹಿಷಿ ವರದಿಯಲ್ಲಿ ಹೇಳಲಾಗಿದೆ. ಈ ಅಂಶವನ್ನು ಕರಡು ತಿದ್ದುಪಡಿ ಹೊಂದಿಲ್ಲ. ಇದರ ಬದಲಾಗಿ ಕನ್ನಡ ಭಾಷಾ ಜ್ಞಾನ ಹೊಂದಿರುವವರು ಕನ್ನಡಿಗರು ಎಂದು ಹೇಳಲಾಗಿದೆ.
ಖಾಸಗಿ ಉದ್ಯಮಗಳಲ್ಲಿ ಉದ್ಯೋಗಿಗಳ ಆಯ್ಕೆ ಪ್ರಕ್ರಿಯೆ ನಡೆಯುವಾಗ ಈ ಅಂಶ ದುರ್ಬಳಕೆಯಾಗುವುದು ಖಚಿತವಾಗಿದೆ. ಕನ್ನಡ ಮಾತನಾಡುವ ಹಾಗೂ ಬರೆಯುವ ಬೇರೆ ಭಾಷಿಕರಿಗೂ ಆದ್ಯತೆ ಮೇರೆಗೆ ಕೆಲಸ ಸಿಗುವ ಸಾಧ್ಯತೆ ಇದೆ. ಹೀಗಾಗಿ, ಈ ಅಂಶವನ್ನು ತೆಗೆದುಹಾಕಿ ಮಹಿಷಿ ವರದಿಯಲ್ಲಿರುವ ಅಂಶವನ್ನು ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.







