ಗುಂಡ್ಲುಪೇಟೆ: ಕೆರೆಗೆ ನೀರು ತುಂಬಿಸಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ, ಪಂಪ್ ಹೌಸ್ ಗೆ ಮುತ್ತಿಗೆ

ಚಾಮರಾಜನಗರ, ಜು.17: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಹುತ್ತೂರು ಕೆರೆಗೆ ಸಾಗಿದ ರೈತರು ಪಂಪ್ ಹೌಸ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇಡೀ ದಿನ ನಡೆದ ಬೆಳವಣಿಗೆಗಳಲ್ಲಿ ಅಧಿಕಾರಿಗಳು ಕೂಡಲೇ ನೀರು ಹರಿಸಲು ಒಪ್ಪದ ಪರಿಣಾಮ ಆಯೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ತಾಲೂಕಿನ ತೆರಕಣಾಂಬಿಯ ಆಂಜನೇಯಸ್ವಾಮಿ ವೃತ್ತದ ಬಳಿ ಸಮಾವೇಶಗೊಂಡ ರೈತರು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕ ನಿರಂಜನಕುಮಾರ್, ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯ ವಿರುದ್ಧ ತೀವ್ರ ಆಕೋಶ ವ್ಯಕ್ತಪಡಿಸಿದರು. ನಂತರ ಗ್ರಾಮದ ಹೊರವಲಯದವರೆಗೆ ಪಾದಯಾತ್ರೆ ನಡೆಸಿ ಘೋಷಣೆ ಕೂಗಿದರು.
ಕಿಲಗೆರೆ ಗೇಟ್ ಸಮೀಪ ಸ್ವಲ್ಪಹೊತ್ತು ರಸ್ತೆ ತಡೆ ನಡೆಸಿ ನಂತರ ಹುತ್ತೂರು ಕೆರೆಯಂಗಳಕ್ಕೆ ತೆರಳಿ ಪಂಪಹೌಸ್‍ಗೆ ಮುತ್ತಿಗೆಹಾಕಿ ಮೋಟಾರು ಚಾಲನೆಗೆ ಮುಂದಾದರು. ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಿದ್ದು, ರೈತರ ಮುತ್ತಿಗೆ ಯತ್ನ ವಿಫಲಗೊಳಿಸಲಾಯಿತು. ಈ ವೇಳೆ ಪೊಲೀಸ್ ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.
ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆಯೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹಾಗೂ ಚಿಂತಕ ವಡ್ಡಗೆರೆ ಚಿನ್ನಸ್ವಾಮಿ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಕಾಮಗಾರಿಯ ಹಾಗೂ ನೀರು ತುಂಬಿಸುವ ಯೋಜನೆಯ ವಿವರ ನೀಡುವಂತೆ ಒತ್ತಾಯಿಸಿದರು. ಸ್ಥಳದಲ್ಲಿಯೇ ಇದ್ದ ಎಇಇ ಮಹದೇವನಾಯ್ಕ ಕಾಮಗಾರಿಯ ವಿವರ ನೀಡಲು ಮುಂದಾದಾಗ ರೈತರ ತೀವ್ರ ಆಕ್ರೋಶ ಎದುರಿಸಬೇಕಾಯಿತು. ಜಿಲ್ಲಾ ಉಸ್ತುವಾರಿ ಸಚಿವರ ಕೈ ಬೊಂಬೆಗಳಾದ ಅಧಿಕಾರಿಗಳು ರೈತರಿಗೆ ಸುಳ್ಳು ಮಾಹಿತಿ ನೀಡುತ್ತಾ ವಂಚಿಸುತ್ತಿದ್ದೀರಿ. ನೀವೂ ನಮ್ಮೊಂದಿಗೆ ಧರಣಿಯಲ್ಲಿ ಕುಳಿತುಕೊಳ್ಳಿ ಎಂದು ಕುಳ್ಳಿರಿಸಿದರು.
ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಈ ಭಾಗದ ಅಂತರ್ಜಲ ವೃದ್ದಿಸುವ ಮುಂದುವರೆದ ಯೋಜನೆಯ ಕಾಮಗಾರಿ ಮುಕ್ತಾಯವಾಗಿದ್ದರೂ ಮೊದಲು ಉದ್ಘಾಟನೆಗೆ ಒಪ್ಪಿದ್ದ ಜಿಲ್ಲಾ ಉಸ್ತುವಾರಿ ಸಚಿವರು ನಿರಾಕರಿಸಿದ್ದಲ್ಲದೆ ನೀರು ಹರಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ತಾಲೂಕಿನ ಶಾಸಕರೂ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದ ಪರಿಣಾಮ ರೈತರು ತೊಂದರೆ ಎದುರಿಸಬೇಕಾಗಿದೆ.
ಮಳೆಗಾಲದಲ್ಲಿ ನದಿಯಲ್ಲಿ ಹೆಚ್ಚಾಗಿ ಹರಿಯುವ ನೀರನ್ನು ಕೆರೆಗಳಿಗೆ ತುಂಬಿಸಬೇಕಾಗಿದ್ದರೂ ರೈತರ ಪ್ರತಿಭಟನೆ ನಿರ್ಧಾರವಾಗುತ್ತಿದ್ದಂತೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪಂಪ್ ಹೌಸ್‍ಗೆ ಬೀಗಹಾಕಿ ಪೊಲೀಸ್ ಬಂದೋಬಸ್ತ್ ಮೂಲಕ ರೈತರನ್ನು ತಡೆಗಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಜಿಲ್ಲಾಡಳಿತವೇ ಆಗಮಿಸಿ ನೀರು ಹರಿಸಬೇಕು. ಅಲ್ಲಿಯವರೆಗೂ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಯಲಿದೆ. ನಾಳೆಯಿಂದ ರೈತ ಮಹಿಳೆಯರು ಜಾನುವಾರುಗಳೊಂದಿಗೆ ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಆದ್ದರಿಂದ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಣ್ಣನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು.
ರೈತರ ಆಗ್ರಹಕ್ಕೆ ಮಣಿದ ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ನಾವು ವಿದ್ಯುತ್ ಸರಬರಾಜು ಮಾಡಲು ಸಿದ್ದವಿರುವುದಾಗಿ ಹೇಳಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಣ್ಣನೀರಾವರಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಶ್ರೀಕಂಠಪ್ರಸಾದ್ ಹಾಗೂ ರಾಜೇಂದ್ರಪ್ರಸಾದ್ ಮಾತನಾಡಿ ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸಿದ ಮೋಟಾರುಗಳನ್ನು ಸರ್ವೀಸ್ ಮಾಡಬೇಕಾಗಿರುವುದರಿಂದ ಸರಬರಾಜು ನಿಲ್ಲಿಸಲಾಗಿದೆ. ಜುಲೈ ವೇಳೆಗೆ ನೀರು ಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದು ರೈತರನ್ನು ಕೆರಳಿಸಿತು.
ಪ್ರಾಯೋಗಿಕ ಪರೀಕ್ಷೆ ನಡೆಸಿದಂತೆ ಕೇವಲ ಮೂರು ದಿನಗಳಾದರೂ ವಡ್ಡಗೆರೆ ಕೆರೆಗೆ ನೀರು ಹರಿಸಿ ಎಂದು ಪಟ್ಟುಹಿಡಿದರು. ಸೆಸ್ಕ್, ಸಣ್ಣ ನೀರಾವರಿ ಅಧಿಕಾರಿಗಳು ಪ್ರತ್ಯೇಕವಾಗಿ ಚರ್ಚಿಸಿದ ನಂತರ ಸೆಸ್ಕ್ ಎಇಇ ಸಿದ್ದಲಿಂಗಪ್ಪ ಸಣ್ಣನೀರಾವರಿ ಇಲಾಖೆಯು ಲಿಖಿತ ಮನವಿ ಸಲ್ಲಿಸಿದರೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದರು.
ಇದರಿಂದ ಕೆರಳಿದ ರೈತರು ಎಲ್ಲಾ ಅಧಿಕಾರಿಗಳೂ ಜಿಲ್ಲಾ ಉಸ್ತುವಾರಿ ಸಚಿವರ ಕೈ ಗೊಂಬೆಗಳಾಗಿದ್ದಾರೆ. ಆದ್ದರಿಂದ ಸ್ಥಳದಲ್ಲಿಯೇ ಪ್ರಸಾದ ತಯಾರಿಸಿ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು. ನೀರು ಹರಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್, ತಾಲೂಕು ಅಧ್ಯಕ್ಷ ಕುಂದಕೆರೆ ಸಂಪತ್ತು, ಮುಖಂಡರಾದ ಕಡಬೂರು ಮಂಜುನಾಥ್, ಹಾಲಹಳ್ಳಿ ಮಹೇಶ್, ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಜರಿದ್ದರು.













